

ಗಂಗಾವತಿ: ಸೌಹಾರ್ದತೆಯಿಂದ ಪ್ರತಿಯೊಂದು ಹಬ್ಬಗಳನ್ನು ಆಚರಿಸಬೇಕಿದ್ದು, ಕಾನೂನು ಸುವ್ಯವಸ್ಥೆಗೆ ಸಹಕರಿಸುವಂತೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.
ನಗರದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.
ಹಬ್ಬಗಳು ಸಾಮರಸ್ಯ ಸೃಷ್ಟಿಸುತ್ತಿದ್ದು, ಜಾತಿ ಬೇಧವಿಲ್ಲದೇ ಪರಸ್ಪರ ಸಹಕಾರದೊಂದಿಗೆ ಆಚರಿಸಬೇಕು. ಅಹಿತಕರ ಘಟನೆ ಜರುಗದಂತೆ ಅಯಾ ಸಮಾಜದ ಮುಖಂಡರು ಎಚ್ಚರಿಕೆವಹಿಸಬೇಕಿದ್ದು, ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡಬಾರದು.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕಿದೆ. ಪಿಒಪಿಗಳನ್ನು ನಿಷೇಧಿಸಲಾಗಿದೆ ಎಂದರು.
ಗ್ರಾಮೀಣ ಪಿಐ ಎನ್.ಮಂಜುನಾಥ ಮಾತನಾಡಿ, ಗಣೇಶ ಹಬ್ಬದ ಸಂದರ್ಭದಲ್ಲಿ ಅಬ್ಬರಕ್ಕೆ ಆದ್ಯತೆ ನೀಡುವ ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಗಮನಹರಿಸಿ.
ಮಹಿಳೆಯರಿಗಾಗಿ ಸ್ಪರ್ಧೆಗಳನ್ನು ಆಯೋಜಿಸಬೇಕಿದ್ದು, ಅನ್ನಸಂತರ್ಪಣೆ ಕೈಗೊಳ್ಳುವಂತೆ ಸಲಹೆ ನೀಡಿದರು. ಗ್ರಾಮೀಣ ಪಿಎಸೈ ಪಂಡಪ್ಪ ಜಾಧವ್, ಎಎಸೈಗಳಾದ ಮಂಜುನಾಥ ಹುಲ್ಲೂರ, ಶೇಖರ್ ನಾಯಕ್ ಸೇರಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.