ಗಂಗಾವತಿ: ತಾಲೂಕಿನ ವಿರುಪಾಪುರಗಡ್ಡಿಯಲ್ಲಿ ಸೋಮವಾರ ಬಸ್ ಪ್ರಯಾಣದ ದರ ಹೆಚ್ಚಳಕ್ಕೆ ಆಕ್ರೋಶಗೊಂಡ ಪ್ರಯಾಣಿಕ ಕೆಕೆಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಕೆಕೆಆರ್‌ಟಿಸಿ ಗಂಗಾವತಿ ಬಸ್‌ಡಿಪೋ ಕಂಡಕ್ಟರ್ ಹನುಮಂತಪ್ಪ ಹಲ್ಲೆಗೊಳಗಾಗಿದ್ದು, ಕಣ್ಣಿಗೆ ಪೆಟ್ಟು ಬಿದ್ದಿದೆ. ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಲಿಗಿಯಿಂದ ಹನುಮನಹಳ್ಳಿಗೆ ತೆರಳಲು ಆರೋಪಿ, ವಿಜಯನಗರ ಜಿಲ್ಲೆ ಸೀತರಾವ ತಾಂಡಾ ನಿವಾಸಿ ಶ್ರೀಧರ ಲಂಬಾಣಿ 30 ರೂ. ನೀಡಿದ್ದು, ಚಿಲ್ಲರೆ ಕೇಳಿದ್ದಾರೆ. ಕೊಟ್ಟ ಹಣ ಸರಿಯಾಗಿದ್ದು, ಇತ್ತೀಚೆಗೆ ಹೆಚ್ಚಳವಾಗಿದೆ ಎಂದು ಕಂಡಕ್ಟರ್ ಹನುಮಂತಪ್ಪ ತಿಳಿಸಿದ್ದಾರೆ. ಕೋಪಗೊಂಡ ಆರೋಪಿ, ಯಾರನ್ನು ಕೇಳಿ ದರ ಹೆಚ್ಚಿಸಿದ್ದರೆಂದು ಜಗಳಕ್ಕಿಳಿದರಲ್ಲದೇ ಹಲ್ಲೆ ನಡೆಸಿ, ಜಗಳ ಬಿಡಿಸಲು ಬಂದ ಚಾಲಕ ಹುಸೇನಿಗೂ ಬೆದರಿಕೆ ಹಾಕಿದ್ದಾನೆ. ಬಸ್‌ನಲ್ಲಿದ್ದ ಪ್ರಯಾಣಿಕರು ಜಗಳ ಬಿಡಿಸಿದ್ದಾರೆ. ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಕಂಡಕ್ಟರ್ ಮತ್ತು ಚಾಲಕ ಪ್ರಯಾಣಿಕ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.