ಅಭಿವೃದ್ಧಿಗೆ ಗಾಲಿ ಜನಾರ್ದನರೆಡ್ಡಿ ಪಣ, ಪತ್ನಿ ಲಕ್ಷ್ಮೀ ಅರುಣಾ ಹೇಳಿಕೆ ವಿಡಿಯೋ ಕಾನ್ಫರೆನ್ಸ್ ಸಭೆ

video conference meeting
ಗಂಗಾವತಿ ಶ್ರೀಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಗಂಗಾವತಿ ವಿಧಾನಸಭೆ ಕ್ಷೇತ್ರದ ರೆಡ್ಡಿ ಅಭಿಮಾನಿಗಳ ಬಳಗ ಮತ್ತು ಕಾರ್ಯಕರ್ತರ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು.
Published on

ಗಂಗಾವತಿ: ಜೈಲು ಶಿಕ್ಷೆ ಪ್ರಕರಣಕ್ಕೆ ತಡೆಯಾಜ್ಞೆ ದೊರೆಯುವ ವಿಶ್ವಾಸವಿದ್ದು, ಯಾವುದೇ ಕಾರಣಕ್ಕೂ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಧೈರ್ಯಕ್ಕೊಳಗಾಗಬಾರದು ಎಂದು ಗಾಲಿ ಜನಾರ್ದನರೆಡ್ಡಿ ಪತ್ನಿ ಹಾಗೂ ಬಿಜೆಪಿ ಲಕ್ಷ್ಮೀ ಅರುಣಾ ಹೇಳಿದರು.

ನಗರದ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಗಂಗಾವತಿ ವಿಧಾನಸಭೆ ಕ್ಷೇತ್ರದ ರೆಡ್ಡಿ ಅಭಿಮಾನಿಗಳ ಬಳಗ ಮತ್ತು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು.

ಜನಸೇವೆಗಾಗಿಯೇ ಗಾಲಿ ಜನಾರ್ದನರೆಡ್ಡಿ ಜೀವನ ಮುಡಿಪಾಗಿಟ್ಟಿದ್ದು, ಯಾರಿಗೂ ಅನ್ಯಾಯ ಮಾಡಿದವರಲ್ಲ. ಜೈಲು ಶಿಕ್ಷೆ ಪ್ರಕರಣದಲ್ಲಿ ತಡೆಯಾಜ್ಞೆ ದೊರೆಯುವ ವಿಶ್ವಾಸವಿದ್ದು, ಕಾರವಾರ ಕಾಂಗ್ರೆಸ್ ಶಾಸಕ ಸತೀಶ ಸೈಲ್, ತಮಿಳುನಾಡಿನ ಇಂತಹದೇ ಪ್ರಕರಣದಲ್ಲಿ ತಡೆಯಾಜ್ಞೆ ಸಿಕ್ಕಿದೆ. ಅದರಂತೆ ನಮಗೂ ಕೋರ್ಟ್‌ನಲ್ಲಿ ಜಯ ದೊರೆಯಲಿದ್ದು, ಶೀಘ್ರವೇ ಕ್ಷೇತ್ರದ ಜನತೆಯ ಸೇವೆಗೆ ಬರಲಿದ್ದೇವೆ.

ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ವಿಧಾನಸಭೆ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಗಾಲಿ ಜನಾರ್ದನರೆಡ್ಡಿ ಪಣತೊಟ್ಟಿದ್ದು, ನಮ್ಮ ಕುಟುಂಬ ಕೊನೆವರೆಗೂ ಕ್ಷೇತ್ರದ ಜನತೆಯ ಸೇವೆ ಮಾಡಲಿದೆ. ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಮ್ಮ ಕುಟುಂಬಕ್ಕೆ ಒಳಿತನ್ನು ಬಯಸಿದ್ದು, ಎಂದಿಗೂ ಮರೆಯಲಾರೆ. ಉಹಾಪೋಹಗಳಿಗೆ ಕಿವಿಗೊಡದೇ ಕೆಲದಿನಗಳ ಕಾಲ ಧೈರ್ಯದಿಂದ ಇರುವಂತೆ ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ಕೋರ್ಟ್‌ನಲ್ಲಿ ತಡೆಯಾಜ್ಞೆ ದೊರೆಯಲಿದ್ದು, ಗಾಲಿ ಜನಾರ್ದನರೆಡ್ಡಿಯವರು ಪುನಃ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದರು.

ವಿವಿಧೆಡೆ ವಿಶೇಷ ಪೂಜೆ: ಗಾಲಿ ಜನಾರ್ದನರೆಡ್ಡಿ ಶಿಕ್ಷೆಗೆ ತಡೆಯಾಜ್ಞೆ ದೊರೆಯಲಿ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂಜನಾದ್ರಿ ಬೆಟ್ಟ, ನಗರದ ದುರ್ಗಾದೇವಿ ದೇವಾಲಯ, ಶ್ರೀ ಚನ್ನಬಸವಸ್ವಾಮಿ ಮಠ, ಶ್ರೀ ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ, ಕರ್ನೂಲಬಾಬಾ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಗೆ ಲಕ್ಷ್ಮೀ ಅರುಣಾ ಬರುವ ಬಗ್ಗೆ ಎರಡು ದಿನಗಳಿಂದಲೇ ಆಪ್ತರು ಪ್ರಚಾರ ಕೈಗೊಂಡಿದ್ದು, ಕೊನೆಗಳಿಗೆಯಲ್ಲಿ ರದ್ದಾಯಿತು. ಅವರಿಗಾಗಿಯೇ ಬಂದಿದ್ದ ಕೆಲವರಿಗೆ ನಿರಾಶೆಯಾಯಿತು. ಕಾರ್ಯಕರ್ತರನ್ನುದ್ದೇಶಿಸಿ ಲಕ್ಷ್ಮೀ ಅರುಣಾ ಮಾತನಾಡುವಾಗ ಭಾವುಕರಾಗಿದ್ದು, ಒದ್ದೆಯಾದ ಕಣ್ಣುಗಳಿಂದಲೇ ಕಾರ್ಯಕರ್ತರಿಗೆ ಧೈರ್ಯ ಹೇಳಿದರು.

ಪ್ರಕರಣ ಕುರಿತು ಮಾತನಾಡಲ್ಲ, ಯಾರಿಗೂ ಮೋಸ ಮಾಡಿಲ್ಲ. ರಾಜಕೀಯ ಕುತಂತ್ರಕ್ಕೆ ಸಿಲುಕಿಕೊಂಡಿದ್ದು ಸತ್ಯ. ಗಾಲಿ ಜನಾರ್ದನರೆಡ್ಡಿಯವರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ನ್ಯಾಯಾಲಯದಲ್ಲಿ ಜಯ ದೊರೆಯಲಿದ್ದು, ಕಾರ್ಯಕರ್ತರು ಅಧೈರ್ಯಗೆಡಬಾರದು.

ಲಕ್ಷ್ಮೀ ಅರುಣಾ ಬಿಜೆಪಿ ಧುರೀಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net