

ಗಂಗಾವತಿ: ತಾಲೂಕಿನ ವಡ್ಡರಹಟ್ಟಿಯನ್ನು ಐಟಿ ಕೇಂದ್ರವನ್ನಾಗಿ ಮಾಡುವ ಉದ್ದೇಶವಿದ್ದು, ರಾಜ್ಯದ ಗ್ರಾಮೀಣ ಭಾಗದ ಮೊದಲ ಐಟಿ ಕೇಂದ್ರವಾಗಲಿದೆ ಎಂದು ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನ ನೀಟ್, ಐಐಟಿ ಮತ್ತು ಜೆಇಇ ಆಡ್ವಾನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಮೀಸಲು, 371ಜೆ ವಿಧೇಯಕ ಸೇರಿ ವಿವಿಧ ಕೋಟಾದಡಿ ವೈದ್ಯಕೀಯ ವಿಭಾಗದಲ್ಲಿ 95 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಜೆಇಇ ಅಡ್ವಾನ್ಸ್‌ನಲ್ಲಿ ಎನ್.ಯಶೋಧಾ ಎಂಬ ವಿದ್ಯಾರ್ಥಿನಿ ಉತ್ತಮ ಅಂಕದೊಂದಿಗೆ ಐಐಟಿ ಮದ್ರಾಸ್‌ನಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೃಷ್ಣ 28ನೇ ರ‌್ಯಾಂಕ್ ಪಡೆದುಕೊಂಡರೆ, ಕಿರಣಕುಮಾರ ಪಾಟೀಲ್ 575 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾನೆ. ಪ್ರವೇಶಾತಿ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು 470, 41 ವಿದ್ಯಾರ್ಥಿಗಳು 460ಕ್ಕೂ ಹೆಚ್ಚು ಅಂಕದೊಂದಿಗೆ ಸಾಧನೆ ಮಾಡಿದ್ದಾರೆ ಎಂದರು.
ಸಾವಿರ ವೈದ್ಯಕೀಯ ಗುರಿ:: ಕಾಲೇಜು ಆರಂಭವಾಗಿ 8 ವರ್ಷದಲ್ಲಿ 276 ವೈದ್ಯಕೀಯ ಸೀಟುಗಳು ದೊರೆತಿದ್ದು, 2030ರೊಳಗೆ 1000 ವೈದ್ಯಕೀಯ ಸೀಟುಗಳನ್ನು ಪಡೆಯುವ ಗುರಿ ಹೊಂದಲಾಗಿದೆ. ಈಗಾಗಲೇ 25 ಜಿಲ್ಲೆಗಳಿಂದ ವಿದ್ಯಾರ್ಥಿಗಳು ವಿದ್ಯಾನಿಕೇತನದಲ್ಲಿ ಪ್ರವೇಶ ಪಡೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬರುವ ರೀತಿಯಲ್ಲಿ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಸ್‌ಟಾವೇರ್ ಕಂಪನಿ ಆರಂಭಕ್ಕೆ ಯೋಜನೆ ರೂಪಿಸಲಾಗಿದ್ದು, ನರ್ಸರಿ ಟೂ ನೌಕರಿ ಪರಿಕಲ್ಪನೆ ಪೂರಕವಾಗಿ ಐಟಿ ಕಂಪನಿ ಆರಂಭಿಸಲಾಗುವುದು ಎಂದರು.
ಶ್ರೀರಾಮನಗರ, ಗಂಗಾವತಿ ಪಿಯು ಕಾಲೇಜು ಪ್ರಾಚಾರ್ಯರಾದ ಜಗನ್ನಾಧರಾವ್, ಉಮಾಮಹೇಶ್ವರ, ಕೆ.ಎಸ್. ಮಲ್ಲಿಕಾರ್ಜುನ, ಪದವಿ ಕಾಲೇಜಿನ ಪ್ರಾಚಾರ್ಯ ಡಿ.ಎಂ. ಅಭಿಷೇಕ ಇದ್ದರು.
ಗ್ರಾಮೀಣ ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಗುರಿಯಿದ್ದು, ಹಂತಹಂತವಾಗಿ ಪೂರೈಸಲಾಗುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸನ್ನಾಗಿಸುವ ಉದ್ದೇಶವಿದೆ.
ನೆಕ್ಕಂಟಿ ಸೂರಿಬಾಬು
ಅಧ್ಯಕ್ಷ, ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ