ಪಿಒಪಿ ಗಣೇಶ ಮೂರ್ತಿಗಳ ಬಳಕೆ-ಮಾರಾಟ ನಿಷೇಧಿಸಿ

Gangavathi Karave manavi
ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮತ್ತು ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಕರವೇ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಪ್ರಭಾರ ತಹಸೀಲ್ದಾರ್ ರವಿ ಅಂಗಡಿಗೆ ಶುಕ್ರವಾರ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಯಮನೂರ್ ಭಟ್, ಪದಾಧಿಕಾರಿಗಳಾದ ಹನುಮೇಶ ಕುರುಬರ್, ಸುನೀಲಕುಮಾರ ಕುಲ್ಕರ್ಣಿ ಇತರರಿದ್ದರು.
Published on

ಗಂಗಾವತಿ: ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮತ್ತು ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಪ್ರಭಾರ ತಹಸೀಲ್ದಾರ್ ರವಿ ಅಂಗಡಿಗೆ ಮನವಿ ಸಲ್ಲಿಸಿದರು.

ಸಮಿತಿ ತಾಲೂಕಾಧ್ಯಕ್ಷ ಯಮನೂರ್ ಭಟ್ ಮಾತನಾಡಿ, ಗಣೇಶ ಹಬ್ಬಕ್ಕಾಗಿ ನಗರ ಮತ್ತು ತಾಲೂಕಿನಲ್ಲಿ ಸಿದ್ಧತೆ ನಡೆದಿದ್ದು, ಪರಂಪರೆ ಮತ್ತು ಸಂಪ್ರದಾಯಕ್ಕೆ ಆದ್ಯತೆ ನೀಡಬೇಕಿದೆ. ಹಿಂದು ಸಾಂಪ್ರದಾಯಿಕ ಗಣೇಶ ಹಬ್ಬದ ನೆಪದಲ್ಲಿ ಕೆಲ ಗಣೇಶ ಮೂರ್ತಿ ತಯಾರಕರು ಹಣಕ್ಕಾಗಿ ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರಲಿದ್ದು, ನಂತರ ಮೂರ್ತಿಗಳನ್ನು ಕೆರೆ, ಹಳ್ಳ, ನದಿ, ಕಾಲುವೆಗಳಲ್ಲಿ ವಿಸರ್ಜಿಸುತ್ತಿರುವುದು ನೀರು ಕಲುಷಿತಗೊಳ್ಳುತ್ತಿದ್ದು, ಜಲಚರಗಳಿಗೂ ಹಾನಿಯಾಗಲಿದೆ. ಪರಿಸರ ರಕ್ಷಣೆಗಾಗಿ ರಾಜ್ಯ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳ ಮೇಲೆ ನಿಷೇಧ ಹೇರಿದೆ.

ನಗರದಲ್ಲಿರುವ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಬೇಕಿದ್ದು, ಪರಿಸರ ಸ್ನೇಹಿ ಮೂರ್ತಿಗಳ ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಷೇಧ ಕಾಯ್ದೆ ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಕರಿಗೆ ನಗರಸಭೆ, ತಾಲೂಕಾಡಳಿತದಿಂದ ಪ್ರೋತ್ಸಾಹಧನ ನೀಡಿ ಬೆಂಬಲಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಹನುಮೇಶ ಕುರುಬರ್, ಸುನೀಲಕುಮಾರ ಕುಲ್ಕರ್ಣಿ, ಹುಲಿಯಪ್ಪ, ಪವನ್‌ಕುಮಾರ ಗಡ್ಡಿ, ಯಲ್ಲಪ್ಪ, ಕೆ.ಮಾರುತಿ, ಗಿಡ್ಡಪ್ಪ, ಮುತ್ತುರಾಜ್ ಕುಷ್ಟಗಿ, ಅಂಬಾಸಾ, ಸುನೀಲ್ ಕುಮಾರ್, ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net