

ಗಂಗಾವತಿ: ದ್ಯೋಗ ಖಾತ್ರಿ ಯೋಜನೆಯನ್ವಯ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಪ್ರಯಾಣ ಭತ್ಯೆಗಾಗಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಜಿಪಂ ಇಂಜಿನಿಯರಿಂಗ್ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಆರಂಭಿಸಿದರು.
ಸಮಿತಿ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಲಾಕ್‌ಡೌನ್ ಮುನ್ನ ಮತ್ತು ಜುಲೈ, ಆಗಸ್ಟ್‌ನಲ್ಲಿ ಅನ್ಯ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಟ್ರ್ಯಾಕ್ಟರ್ ಬಾಡಿಗೆ ನೀಡಿಲ್ಲ. ಪ್ರಯಾಣ ಭತ್ಯೆ ನೀಡಲು ಕಾಯ್ದೆಯಲ್ಲಿ ಅವಕಾಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಲಿಕಾರರೇ ಭರಿಸುವಂತಾಗಿದೆ. ಭತ್ಯೆಕ್ಕಾಗಿ ಹಲವು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ತಾಲೂಕಿನ ಯರಡೋಣ, ಗುಂಡೂರು, ಹೊಸಳ್ಳಿ, ಚಿಕ್ಕಜಂತಕಲ್, ಚಿಕ್ಕಬೆಣಕಲ್, ಢಣಾಪುರ, ಮುಷ್ಟೂರು ಗ್ರಾಪಂ ವ್ಯಾಪ್ತಿಯ ಕೂಲಿಕಾರರೊಂದಿಗೆ ಧರಣಿ ನಿರಂತರವಾಗಿದ್ದು, ಅಧಿಕಾರಿಗಳು ಭರವಸೆ ನೀಡುವವರೆಗೂ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಪದಾದಿಕಾರಿಗಳಾದ ಬಾಳಪ್ಪ ಹುಲಿಹೈದ್‌ರ್, ಶಿವಪ್ಪ, ಮಂಜುನಾಥಡಗ್ಗಿ, ಎಂ.ಬಸವರಾಜ್, ಹುಸೇನಪ್ಪ, ಮರಿನಾಗಪ್ಪ ಇತರರಿದ್ದರು.