

ಗಂಗಾವತಿ: ಕರೊನಾ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದು, ಮೂರನೇ ಅಲೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಡಿಎಚ್‌ಒ ಟಿ.ಲಿಂಗರಾಜ ಹೇಳಿದರು.
ನಗರದ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕೋವಿಡ್-19 ನಿಯಂತ್ರಣ ಕಾರ್ಯಗಾರ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸಾಮಾನ್ಯ ಸಭೆ ಹಾಗೂ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವ ಲೆಕ್ಕಿಸದೆ ಕರೊನಾ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಸಂಭಾವ್ಯ 3ನೇ ಅಲೆ ನಿಯಂತ್ರಣಕ್ಕೂ ಶ್ರಮಿಸಬೇಕಿದೆ.
ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಉಪಕರಣಗಳ ದಾಸ್ತಾನು ಮಾಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳಾದ ಎಂ.ಜಿ.ಮಹೇಶ, ಜಂಬಯ್ಯ, ಗೌರಿಶಂಕರ, ರವಿಕುಮಾರ್ ಹಾಗೂ ಇತರರಿದ್ದರು.