

ವೀರಾಪುರ ಕೃಷ್ಣಗಂಗಾವತಿ: ನಗರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದ ಮಧ್ಯೆ ಮೌನ ಸಂಘರ್ಷ ಶುರುವಾಗಿದ್ದು, ಈ ಕಾರಣಕ್ಕೆ ನಗರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
ಕ್ಷೇತ್ರದ ಶಾಸಕ ಸ್ಥಾನ ಅನರ್ಹತೆಯಾಗುತ್ತಿದ್ದಂತೆ ನಗರಸಭೆಯಲ್ಲಿ ಅಧಿಕಾರಿ ವರ್ಗದ ದರ್ಬಾರ್ ಮುನ್ನೆಲೆಗೆ ಬಂದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾಯಿತ ಸದಸ್ಯರು ಅನಾಥರಾಗಿದ್ದಾರೆ. ಕಳೆದೆರೆಡು ವರ್ಷಗಳಿಂದ ಅನುದಾನ ಕೊರತೆಯಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಬೇರೆ ಪಕ್ಷದ ಶಾಸಕ ಇದ್ದಿದ್ದರಿಂದ ಬರುತ್ತಿದ್ದ ಅಷ್ಟಿಷ್ಟು ಅನುದಾನಕ್ಕೂ ಕಾಂಗ್ರೆಸ್ ಸರ್ಕಾರ ಕೊಕ್ಕೆ ಹಾಕಿದೆ. ಗಾಲಿ ಜನಾರ್ದನ ರೆಡ್ಡಿ ಅಧಿಕಾರದಲ್ಲಿದ್ದಾಗ ಅಧಿಕಾರಿಗಳು ಸುಮ್ಮರಿದ್ದರು. ಈಗ ಅಧಿಕಾರ ಚಲಾಯಿಸಲು ಶುರು ಮಾಡಿದ್ದಾರೆ.
ಬಂದ ಅನುದಾನ ಬಳಸಿಕೊಳ್ಳುವ ತರಾತುರಿಯಲ್ಲಿ ಒಮ್ಮತಾಭಿಪ್ರಾಯದಿಂದ ಕಾಮಗಾರಿ ಕೈಗೊಳ್ಳುತ್ತಿಲ್ಲ ಮತ್ತು ಯೋಜನೆ ರೂಪಿಸುತ್ತಿಲ್ಲ. ಕೆಕೆಆರ್‌ಡಿಬಿ, 15ನೇ ಹಣಕಾಸು, ನಗರೋತ್ಥಾನ ಯೋಜನೆ ಅನುದಾನವಿದ್ದರೂ, ಅಧಿಕಾರಿಗಳು ಮತ್ತು ಸದಸ್ಯರ ನಡುವಿನ ಹೊಂದಾಣಿಕೆ ಕೊರತೆಯಿಂದ ನಿರ್ದಿಷ್ಟ ಕಾಮಗಾರಿ ಕೈಗೊಳ್ಳುತ್ತಿಲ್ಲ. ಅಧಿಕಾರಿ ವರ್ಗ ರೂಪಿಸಿದ ಯೋಜನೆಗಳಿಗೆ ಸದಸ್ಯರ ಸಹಮತವಿಲ್ಲ. ಇನ್ನು ಸದಸ್ಯರು ನೀಡುವ ಪಟ್ಟಿಗೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದರ ಮಧ್ಯೆ ತಾಂತ್ರಿಕ ಸಿಬ್ಬಂದಿ ಗೊಂದಲದಲ್ಲಿದ್ದು, ಯಾರಿಗೆ ಮನ್ನಣೆ ನೀಡಬೇಕೆಂಬುದು ತಿಳಿಯುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯೋಜನೆ ರೂಪಿಸಿದ್ದರಿಂದ ಆಕ್ಷೇಪಣೆ, ತಕರಾರು ಅರ್ಜಿಗಳ ಸಲ್ಲಿಕೆಯಾಗುತ್ತಿದ್ದು, ಜಿಲ್ಲಾಡಳಿತ ರೋಸಿ ಹೋಗಿದೆ.
ಶಾಸಕ ಅನರ್ಹತೆ ಆದೇಶ ಹೊರ ಬೀಳುತ್ತಿದ್ದಂತೆ ಪೌರಾಯುಕ್ತ ಸುಪ್ರೀಂ ಆಗಿದ್ದಾರೆ. 15ನೇ ಹಣಕಾಸು ಯೋಜನೆ ಅನುದಾನವನ್ನು ನಗರದ ಸಮಗ್ರ ರಸ್ತೆ ಅಭಿವೃದ್ಧಿ ವ್ಯಯಿಸಲು ಮುಂದಾಗಿದ್ದು, ಆಡಳಿತ ಪಕ್ಷದ ಸದಸ್ಯರೇ ವಿರೋಧಿಸಿದ್ದಾರೆ. ರಸ್ತೆ ಅಭಿವೃದ್ಧಿ ಕೈಬಿಟ್ಟು, ವಾರ್ಡ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧ್ಯಕ್ಷೆ ಮೂಲಕ ಪಟ್ಟಿ ಕೊಟ್ಟ ಸದಸ್ಯರು, ಅನರ್ಹ ಶಾಸಕ ಗಾಲಿ ಜನಾರ್ದನರೆಡ್ಡಿ ಮೂಲಕ ಅಧಿಕಾರಿ ವರ್ಗದ ಮೇಲೆ ಪ್ರಭಾವ ಬೀರಿದ್ದಾರೆ. ಪರಿಣಾಮ ಕಾಮಗಾರಿ ಸ್ವರೂಪ ಬದಲಾಗಿದ್ದು, 15 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಸದಸ್ಯರಲ್ಲಿನ ಹೊಂದಾಣಿಕೆ ಕೊರತೆಯಿಂದ ಅಧಿಕಾರಿ ವರ್ಗ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು, ಸದಸ್ಯತ್ವ ಸ್ಥಾನಕ್ಕಾದರೂ ಗೌರವ ನೀಡುತ್ತಿಲ್ಲ. ವಾರ್ಡ್ ಸಮಸ್ಯೆ ಹೇಳಿದರೆ, ಪರೋಕ್ಷ ರೀತಿಯಲ್ಲಿ ಬೆದರಿಕೆ ಹಾಕಿದ ಘಟನೆಯಿದ್ದು, ಪೌರಾಯುಕ್ತ ಮತ್ತು ಸದಸ್ಯರೊಬ್ಬರ ನಡುವಿನ ಸಂಘರ್ಷದ ಆಡಿಯೋ ವೈರಲ್ ಆಗಿದೆ. ಕೆಲ ಸದಸ್ಯರು ವೈಯಕ್ತಿಕ ಕೆಲಸನಿಂತ ಪರಿಣಾಮವೇ ಅಧಿಕಾರಿ ವರ್ಗದ ದರ್ಪಕ್ಕೆ ಕಾರಣವಾಗಿದ್ದು, ವಿಪಕ್ಷ ಸದಸ್ಯರಿಗೆ ಕೆಲಸವಿಲ್ಲದಂತಾಗಿದೆ. ಪೌರಾಯುಕ್ತ ಕಚೇರಿಗೆ ಬರುತ್ತಿಲ್ಲ, ತಾಂತ್ರಿಕ ವರ್ಗದವರಲ್ಲಿ ಸ್ಪಷ್ಟತೆಯಿಲ್ಲದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಗಂಗಾವತಿ ನಗರಸಭೆ ಅಧಿಕಾರಿ ವರ್ಗ ಮತ್ತು ಸದಸ್ಯರ ನಡುವಿನ ಹೊಂದಾಣಿಕೆ ಕೊರತೆಯಿಂದ ತರಾತುರಿಯಲ್ಲಿ ಕೈಗೊಂಡ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅರಿಹಂತ ಕಾಲನಿಯ ರಸ್ತೆ ಅರೆಬರೆ ಯಾಗಿಸಿ ಕೈಬಿಟ್ಟಿದ್ದರಿಂದ ಹೊಂಡವಾಗಿ ಮಾರ್ಪಟ್ಟಿದೆ. ಸುಸ್ಥಿತಿಯಲ್ಲಿದ್ದ ಸಿಬಿಎಸ್ ವೃತ್ತದಿಂದ ಗಾಂಧಿ ವೃತ್ತದವರೆಗಿನ ಬೀದಿ ದೀಪಗಳನ್ನು ಕಿತ್ತಿದ್ದರಿಂದ 20 ದಿನಗಳಿಂದ ನಗರ ಕತ್ತಲುಮಯವಾಗಿದೆ. ಸಿಬಿಎಸ್ ವೃತ್ತದಿಂದ ಕನಕಗಿರಿ ರಸ್ತೆವರೆಗಿನ ಡಿವೈಡರ್ ಕಾಮಗಾರಿಗೂ ವೇಗ ದೊರೆಯುತ್ತಿಲ್ಲ. ಮುಖ್ಯವಾಗಿ ಕಾಮಗಾರಿ ಪ್ರದೇಶದಲ್ಲಿ ಟೆಂಡರ್ ಮೊತ್ತ ಸೇರಿ ಸಂಪೂರ್ಣ ಮಾಹಿತಿ ಹಾಕಬೇಕೆಂಬ ಸರ್ಕಾರದ ನಿಯಮಯನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ.
ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಶಾಸಕ ಸ್ಥಾನ ಅನರ್ಹತೆ ಮತ್ತು ನಗರಸಭೆ ಸದಸ್ಯರ ನಿರ್ಲಕ್ಷ್ಯದಿಂದ ಅಭಿವೃದ್ಧಿ ಯಾಗುತ್ತಿಲ್ಲ. ನಗರಾಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಸಕ್ತಿವಹಿಸಲಿ. | ಜೆ.ಭಾರದ್ವಾಜ್ ಅಧ್ಯಕ್ಷ, ಕ್ರಾಂತಿ ಚಕ್ರ ಬಳಗ ಗಂಗಾವತಿ ಗಂಗಾವತಿ ನಗರದ ಅಭಿವೃದ್ಧಿಗೆ ಸದಸ್ಯರ ಹಿತಾಸಕ್ತಿಯಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ಪೌರಾಯುಕ್ತರಿಗೆ ಸೂಚಿಸಿದ್ದು, ವಾರ್ಡ್ ಗಳಲ್ಲಿ ಅಭಿವೃದ್ಧಿ ಕೈಗೊಳ್ಳುವಂತೆ ಪಟ್ಟಿ ಮಾಡಿಕೊಡಲಾಗಿದೆ. ಕೈಗೊಂಡ ಕಾಮಗಾರಿಗಳ ವೇಗಕ್ಕೆ ಕ್ರಮ ಕೈಗೊಳ್ಳಲಾಗುವುದು. | ಹೀರಾಬಾಯಿಸಿಂಗ್ ಅಧ್ಯಕ್ಷೆ, ನಗರಸಭೆ, ಗಂಗಾವತಿ