

ಗಂಗಾವತಿ: ನಗರದ ಪ್ರತಿಷ್ಠಿತ ಟಿಎಪಿಸಿಎಂಎಸ್ ಆಡಳಿತಕ್ಕಾಗಿ ಶುಕ್ರವಾರ ನಿಗದಿಪಡಿಸಿದ್ದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯನ್ನು ಕೋರಂ ಕೊರತೆ ಕಾರಣ ಮುಂದೂಡಲಾಯಿತು.
ನಗರದ ಮಧ್ಯಭಾಗದಲ್ಲಿ ಸ್ಥಿರಾಸ್ತಿ ಹೊಂದಿರುವ ಟಿಎಪಿಸಿಎಂಎಸ್‌ಗೆ 60ವರ್ಷಗಳ ಇತಿಹಾಸವಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರತಿಷ್ಟೆಯಾಗಿದೆ. ಓರ್ವ ನಾಮನಿರ್ದೇಶನ ಮತ್ತು 14 ಚುನಾಯಿತ ಸದಸ್ಯರು ಸೇರಿ 15 ಸದಸ್ಯರು ಮತದಾನದ ಹಕ್ಕು ಪಡೆದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾದ ಚನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕನಕಪ್ಪ ಮತ್ತು ಈ.ನಾಗರಾಜ್ ನಾಮಪತ್ರ ಸಲ್ಲಿಸಿದ್ದರು.
ಟಿಎಪಿಸಿಎಂಎಸ್ ಬೈಲಾದಂತೆ ಚುನಾವಣೆ ಮುನ್ನ ಸಭೆ ನಡೆಸಬೇಕಿದ್ದು, ಕೋರಂ ಇದ್ದರೆ ಮಾತ್ರ ಚುನಾವಣೆ ನಡೆಯಲಿದೆ. ಆದರೆ ಸಭೆ ಕೋರಂಗೆ 9 ಸದಸ್ಯರು ಹಾಜರಾಗಬೇಕಿತ್ತು. 7 ಮಂದಿ ಮಾತ್ರ ಭಾಗವಹಿಸಿದ್ದರಿಂದ ಕೋರಂ ಕೊರತೆ ನೆಪವೊಡ್ಡಿ ಚುನಾವಣೆ ಮುಂದೂಡಿದ ನಿರ್ಧಾರವನ್ನು ಚುನಾವಣಾಧಿಕಾರಿ ಶಿವಾಜಿ ಪ್ರಕಟಿಸಿದರು.
ಗಂಗಾವತಿ, ಟಿಎಪಿಸಿಎಂಎಸ್ ಚುನಾವಣೆ, ಕೋರಂ ಕೊರತೆ, ಸಭೆ ರದ್ದು,ಬಿಜೆಪಿ ಬೆಂಬಲಿತರ ಪ್ರಾಭಲ್ಯವಿರುವ ಟಿಎಪಿಸಿಎಂಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿಯಿದ್ದು, ಚನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ ಅಕಾಂಕ್ಷಿಗಳಾಗಿದ್ದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸಭೆ ನಡೆದಿದ್ದು, ಇಬ್ಬರಿಗೂ ಅಧಿಕಾರ ಹಂಚಿಕೆ ಒಪ್ಪಂದ ಮಾಡಲಾಯಿತು.
ಆದರೆ ಮೊದಲ ಅವಧಿ ನನಗೇ ಬೇಕು ಎಂದು ಇಬ್ಬರೂ ಪಟ್ಟು ಹಿಡಿದಿದ್ದರಿಂದ ಇಬ್ಬರ ನಡುವೆ ನಡೆಸಿದ ರಾಜಿ-ಸಂಧಾನ ವಿಲವಾಯಿತು. ಬಿಜೆಪಿ ಬೆಂಬಲದೊಂದಿಗೆ ಚನ್ನಪ್ಪ ಮಳಗಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲದೊಂದಿಗೆ ಜೋಗದ ನಾರಾಯಣಪ್ಪ ನಾಯಕ ನಾಮಪತ್ರ ಸಲ್ಲಿಸಿ ಬಿಜೆಪಿ ಮುಖಂಡರಿಗೆ ಶಾಕ್ ನೀಡಿದರು. ಚನ್ನಪ್ಪ ಮಳಗಿ ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡರೂ, ಉಳಿದವರು ಗೈರಾಗಿದ್ದರಿಂದ ಚುನಾವಣೆ ಮುಂದೂಡಲಾಯಿತು.