ಭಾರತದ ಉಕ್ಕಿನ ಮನುಷ್ಯನಿಂದ ಇತಿಶ್ರೀ

gvt 01
ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ತಹಸೀಲ್ದಾರ್ ಯು.ನಾಗರಾಜ್ ಇತರರಿದ್ದರು.
Published on

ಗಂಗಾವತಿ: ನಿಜಾಮರ ಕ್ರೌರ್ಯಕ್ಕೆ ತಕ್ಕ ಉತ್ತರ ನೀಡಿದ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ನಿತ್ಯ ಸ್ಮರಣೀಯರಾಗಿದ್ದು, ಕಕ ಭಾಗಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಮನಸೆಳೆಯಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟೀಷರಿಂದ ದೇಶ ಮುಕ್ತಿ ಹೊಂದಿದ್ದರೂ, ಕಕ ಭಾಗಕ್ಕೆ ಒಂದು ವರ್ಷದ ನಂತರ ವಿಮೋಚನೆ ಸಿಕ್ಕಿದೆ.

ನಿಜಾಮರ ದುರಾಡಳಿತಕ್ಕೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಭಾಯ್ ಪಟೇಲ್ ಇತಿಶ್ರೀ ಹಾಡಿದ್ದು, ದೊರೆತ ಸ್ವಾತಂತ್ರೃವನ್ನು ಅಭಿವೃದ್ಧಿ ಮೂಲಕ ಉಳಿಸಿಕೊಳ್ಳಬೇಕಿದೆ ಎಂದರು.

ಪೊಲೀಸ್, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ತಹಸೀಲ್ದಾರ್ ಯು.ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.

ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ಬಿಇಒ ಎಚ್.ಬಿ.ನಟೇಶ ಇತರರಿದ್ದರು.

ದಿಢೀರ್ ಪ್ರತಿಭಟನೆ

ಕಕ ಉತ್ಸವಕ್ಕೆ ಬಹುತೇಕ ಶಿಕ್ಷಕರು ಮತ್ತು ಅಧಿಕಾರಿಗಳು ಗೈರು ಹಾಜರಾಗಿದ್ದು, ಅರ್ಧವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ಮಕ್ಕಳು ಬರಲಿಲ್ಲ. ಕನಕಗಿರಿಯಲ್ಲಿ ಅಖಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರು ಕನಕಗಿರಿಗೆ ತೆರಳಿದ್ದರು.

ಕಕ ಉತ್ಸವ ಎಂದು ಗೊತ್ತಿದ್ದರೂ, ಪರೀಕ್ಷೆ ಮುಂದೂಡದ ಮತ್ತು ಬಾರದ ಅಧಿಕಾರಿಗಳ ವರ್ತನೆ ಖಂಡಿಸಿ, ಜಿಲ್ಲಾ ಸರ್ವಾಂಗೀಣ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ವೇದಿಕೆ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮನವೊಲಿಸಿದ್ದರಿಂದ ಧರಣಿ ಹಿಂದಕ್ಕೆ ಪಡೆದಿದ್ದು, ಈ ಬಗ್ಗೆ ಸರ್ಕಾರದ ಗಮನಸೆಳೆಯುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net