ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಸರ್ವೇ ಮೇಲ್ವಿಚಾರಕ

28082020 Gangavati ACB ride
Published on

ಗಂಗಾವತಿ: ನಗರದ ಮಿನಿವಿಧಾನಸೌಧದ ಭೂಮಾಪನ ಇಲಾಖೆ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪನನ್ನು ಎಸಿಬಿ ಅಧಿಕಾರಿಗಳ ತಂಡ ಶುಕ್ರವಾರ ಬಂಧಿಸಿದೆ.

ತಾಲೂಕಿನ ಢಣಾಪುರ ಗ್ರಾಪಂ ವ್ಯಾಪ್ತಿಯ ಹೆಬ್ಬಾಳ ಕ್ಯಾಂಪ್‌ನ ಪಿ.ಲಕ್ಷ್ಮಿ ಎಂಬುವರು ಸೇರಿ ನಿವೇಶನದ 11.ಬಿ ಪ್ರಮಾಣ ಪತ್ರಕ್ಕಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಪ್ರಮಾಣಪತ್ರಕ್ಕೆ ಪೂರಕವಾಗಿ ಸರ್ವೇ ಇಲಾಖೆಯಿಂದ ಉದ್ದೇಶಿತ ನಿವೇಶನ ಗಾಂವಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂಬ ನಕಾಶೆ ನೀಡಲು ಸರ್ವೇ ಇಲಾಖೆಗೆ ಜೂ.6 ರಂದು ಶಿಾರಸ್ಸು ಮಾಡಲಾಗಿತ್ತು.

ನಕಾಶೆಗಾಗಿ ಸರ್ವೇ ಮೇಲ್ವಿಚಾರಕ ಗಂಗಾಧರ 5 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದು, ಮೊಬೈಲ್‌ನಲ್ಲಿ 4 ಸಾವಿರ ರೂ.ಗಳಿಗೆ ವ್ಯವಹಾರ ಕುದುರಿಸಿಕೊಂಡಿದ್ದರು. ಲಂಚದ ಬೇಡಿಕೆಯ ಬಗ್ಗೆ ಪಿ.ಲಕ್ಷ್ಮಿ ಪುತ್ರ ಪಿ.ರಾಜು ಎಂಬುವರು ಎಸಿಬಿಗೆ ದೂರು ನೀಡಿದ್ದರು.

ಸರ್ವೇ ಇಲಾಖೆ ಕಚೇರಿಯಲ್ಲಿ ಅರ್ಜಿದಾರರಿಂದ 4ಸಾವಿರ ರೂ.ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಹಣ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಒಂದು ವರ್ಷದಲ್ಲಿ ಮಿನಿವಿಧಾನ ಸೌಧದಲ್ಲಿ ಮೂರನೇ ಪ್ರಕರಣವಾಗಿದ್ದು, ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಉಪತಹಸೀಲ್ದಾರ್ ಶರಣಪ್ಪ ಮತ್ತ ಕಂದಾಯ ನಿರೀಕ್ಷಕ ವಿಜಯಕುಮಾರ ಎಸಿಬಿ ಬಲೆಗೆ ಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net