

ಗಂಗಾವತಿ: ಉಪವಿಭಾಗ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತಾಲೂಕಿನ ಅರಳಹಳ್ಳಿ ಭಾಗದಲ್ಲಿ ನಿರ್ಮಿಸುವ ಯೋಜನೆಯಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.
ನಗರದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ 60 ಹಾಸಿಗೆ ಆಸ್ಪತ್ರೆಯ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆ ಹಿನ್ನೆಲೆಯಲ್ಲಿ 30 ಹಾಸಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ನ್ಯಾಷನಲ್ ಹೆಲ್ತ್ ಮಿಷನ್ ಅಡಿ ಆಸ್ಪತ್ರೆ ನಿರ್ಮಾಣಕ್ಕೆ 4.91 ಕೋಟಿ ರೂ.ಮಂಜೂರಾಗಿದ್ದು, 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಚಿಕಿತ್ಸೆ ಉಪಕರಣಗಳಿಗಾಗಿ ಹೆಚ್ಚುವರಿಯಾಗಿ 65ಲಕ್ಷ ರೂ.ಮಂಜೂರಾಗಿದ್ದು, ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಒಪ್ಪಿಗೆ ದೊರೆತಿದೆ ಎಂದರು.
ಆಸ್ಪತ್ರೆ ವ್ಯವಸ್ಥೆ, ಕರೊನಾ ವ್ಯಾಕ್ಸಿನ್ ಮತ್ತು ವೈದ್ಯ ಸಿಬ್ಬಂದಿ ಕಾರ್ಯಕ್ಷಮತೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಲಕನಂದಾ ಮಾತನಾಡಿದರು. ತಾಪಂ ಅಧ್ಯಕ್ಷ ಮಹ್ಮದ್ ರಫಿ, ಇಒ ಡಾ.ಮೋಹನ್, ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ತಾಲೂಕು ವೈದ್ಯಾಧಿಕಾರಿ ಗೌರಿಶಂಕರ, ನಗರಸಭೆ ಸದಸ್ಯರಾದ ನೀಲಕಂಠಪ್ಪ ಕಟ್ಟಿಮನಿ, ನವೀನ್‌ಮಾಲಿ ಪಾಟೀಲ್, ಪರಶುರಾಂಮಡ್ಡೇರ್, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾದ ವೀರೇಶ ಸುಳೇಕಲ್, ನಾಗರಾಜನಾಯಕ, ಟಿ.ಆರ್.ರಾಯಭಾಗಿ, ಬಿಜೆಪಿ ಮುಖಂಡರಾದ ದೇವಪ್ಪ, ಎಸ್.ರಾಘವೇಂದ್ರಶ್ರೇಷ್ಠಿ, ಮಹಾಲಿಂಗಪ್ಪ ಬನ್ನಿಕೊಪ್ಪ, ಚನ್ನಪ್ಪ ಮಳಗಿ, ಪುಷ್ಪಾಂಜಲಿ ಗುನ್ನಾಳ್, ಲಲಿತಾ, ದೇವಣ್ಣ, ಸುರೇಶ ಇತರರಿದ್ದರು.
ಇದೇ ಸಂದರ್ಭ ನಗರದ 32ನೇ ವಾರ್ಡ್ ಹಿರೇಜಂತಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 31.50 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.