ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಲಿ, ಡಿವೈಎಸ್ಪಿ ಆರ್. ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿಕೆ

clearance operation
ಗಂಗಾವತಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಆಪರೇಷನ್ ತೆರವು ಕಾರ್ಯಾಚರಣೆಯಲ್ಲಿ ವ್ಯಾಪಾರಿಗಳ ವಸ್ತುಗಳನ್ನು ಜಪ್ತಿ ಮಾಡಿರುವುದು. ಪಿಐ ಪ್ರಕಾಶ ಮಾಳೆ, ಸಂಚಾರಿ ಪಿಎಸೈ ಶಾರದಮ್ಮ ಇತರರಿದ್ದರು.
Published on

ಗಂಗಾವತಿ: ನಗರದ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರಿಗಳು ಗಮನಹರಿಸಬೇಕಿದ್ದು, ನಿರ್ಲಕ್ಷಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಆರ್. ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

ನಗರದಲ್ಲಿನ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಆಪರೇಷನ್ ತೆರವು ಕಾರ್ಯಾಚರಣೆಯಲ್ಲಿ ಮಾತನಾಡಿದರು. ುಟ್‌ಪಾತ್ ಸೇರಿ ರಸ್ತೆಯಲ್ಲಿ ವ್ಯಾಪಾರಿಗಳ ವಹಿವಾಟು ಹೆಚ್ಚುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವೊಮ್ಮೆ ಅಪಘಾತ ಸಂಭವಿಸಿದ ಉದಾಹರಣೆಗಳಿವೆ. ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಬೇಕಿದ್ದು, ರಸ್ತೆ ಮೇಲೆಲ್ಲ ಸಲಕರಣೆಗಳನ್ನಿಡುವಂತಿಲ್ಲ. ಮೊದಲ ಹಂತದಲ್ಲಿ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗುತ್ತಿದ್ದು, ನಂತರ ವಸ್ತುಗಳನ್ನು ಜಪ್ತಿ ಮಾಡಲಾಗುವುದು. ನಿರ್ಲಕ್ಷಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೀದಿ ಬದಿ ವ್ಯಾಪಾರಕ್ಕಾಗಿ ರೂಪಿಸಿರುವ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಾಚರಣೆ: ನಗರದ ಗಾಂಧಿ ವೃತ್ತದಿಂದ ಮಹಾವೀರ ವೃತ್ತದವರೆಗೂ ಆಪರೇಶನ್ ತೆರವು ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ, ಬೀದಿಬದಿಯ ವ್ಯಾಪಾರಿಗಳ ಸಲಕರಣೆಗಳನ್ನು ಜಪ್ತಿ ಮಾಡಿದರು. ಕೆಲ ವ್ಯಾಪಾರಿಗಳಿಗೆ ಬುದ್ಧಿವಾದ ಹೇಳಿದರೆ, ಇನ್ನೂ ಕೆಲವರಿಗೆ ಪ್ರಕರಣ ದಾಖಲಿಸುವ ಎಚ್ಚರಿಕೆಯೂ ನೀಡಲಾಯಿತು. ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ವಾಹನಗಳಿಗೆ ದಂಡ ಹಾಕಲಾಯಿತು. ವಾರದೊಳಗೆ ಸುಗಮ ಸಂಚಾರವಾಗದಿದ್ದರೆ ಪುನಃ ತೆರವುಗೊಳಿಸುವ ಸೂಚನೆ ವ್ಯಾಪಾರಿಗಳಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net