ಬೀದಿ ವ್ಯಾಪಾರಿಗಳಿಗೆ ಷರತ್ತುಬದ್ಧ ಗಡುವು, ಟಿಸಿ ಮಾರುಕಟ್ಟೆಗೆ ತೆರಳಲು 15 ದಿನ ಕಾಲಾವಕಾಶ

MEETING
ಗಂಗಾವತಿ ನಗರಸಭೆ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಂಗಳವಾರ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಪರಿಸರ ಇಂಜಿನಿಯರ್ ಚೇತನನಾಯ್ಕ, ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ್ ಇತರರಿದ್ದರು.
Published on

ಗಂಗಾವತಿ: ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ಬ್ರೇಕ್ ನೀಡಲಾಗಿದ್ದು, ನಗರಸಭೆ ನಿಯಮ ಪಾಲನೆಗೆ 15 ದಿನಗಳ ಗಡವು ನಿಗದಿಪಡಿಸಲಾಗಿದೆ ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ರಸ್ತೆ ಬದಿಯಲ್ಲಿ ವಹಿವಾಟು ನಿಷೇಧಿಸಲಾಗಿದ್ದು, ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ಕೆಲ ವ್ಯಾಪಾರಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ. ತ್ಯಾಜ್ಯ ಸೇರಿ ಕೊಳಚೆ ನೀರನ್ನು ರಸ್ತೆಯಲ್ಲಿ ಹಾಕುತ್ತಿದ್ದು, ನಿಷೇಧಿತ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಬಳಕೆ ಹೆಚ್ಚುತ್ತಿವೆ.

ಇದರಿಂದ ನಗರದ ಸೌಂದರೀಕರಣಕ್ಕೆ ಧಕ್ಕೆಯಾಗುತ್ತಿದ್ದು, ರಸ್ತೆಯಲ್ಲಿ ವಹಿವಾಟುವಿನಿಂದ ಸಂಚಾರ ಸಿಕ್ಕು ಹೆಚ್ಚಾಗಿದೆ. ಇನ್ನು ಮುಂದೆ ನಗರಸಭೆ ನಿಗದಿಪಡಿಸಿದ ಜಾಗದಲ್ಲಿ ವಹಿವಾಟು ನಡೆಸಬೇಕಿದ್ದು, ಎಲ್ಲೆಂದರಲ್ಲಿ ತಳ್ಳುಬಂಡಿಗಳನ್ನು ನಿಲ್ಲಿಸುವುಂತಿಲ್ಲ. ಇನ್ನೂ ಕೆಲ ವ್ಯಾಪಾರಿಗಳು ಸ್ವಂತ ಜಾಗವೆಂಬಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನ್ಯಾಯಾಲಯ ಆದೇಶದಂತೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ವಹಿವಾಟುವಿಗೆ ಅವಕಾಶ ನೀಡಲ್ಲ ಎಂದರು.

ಬೀದಿ ಬದಿಯ ವ್ಯಾಪಾರವನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಬದುಕುತ್ತಿದ್ದು, ಏಕಾಏಕಿ ತೆರವಿನಿಂದ ತೊಂದರೆಯಾಗಲಿದೆ. ನಗರಸಭೆ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲಿಸುತ್ತೇವೆ. ಉಲ್ಲಂಸಿದರೆ ಸಾವಿರಾರು ರೂ. ದಂಡ ಹಾಕಿ. ವ್ಯಾಪಾರಕ್ಕೆ ಸೂಕ್ತ ಜಾಗ ಗುರುತಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳಿ ಎಂದು ಕೆಲ ವ್ಯಾಪಾರಿಗಳು ಮನವಿ ಮಾಡಿದರು.

ವ್ಯಾಪಾರಿಗಳ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಕೆಲ ಷರತ್ತುಗಳೊಂದಿಗೆ 15 ದಿನದ ಗಡವು ನೀಡಲಾಗಿದೆ. ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡಬಾರದು, ಚೇರ್‌ಗಳನ್ನು ರಸ್ತೆಯಲ್ಲಿಡಬಾರದು, ಟೆಂಟ್‌ಗಳನ್ನು ಹಾಕುವಂತಿಲ್ಲ. ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಬಳಸುವಂತಿಲ್ಲ ಮತ್ತು ತ್ಯಾಜ್ಯ ರಸ್ತೆಗೆ ಹಾಕುವಂತಿಲ್ಲ ಸೇರಿ ವಿವಿಧ ಷರತ್ತುಗಳನ್ನು ಪಾಲಿಸಬೇಕು. ಗುಂಡಮ್ಮ ಕ್ಯಾಂಪ್‌ನಲ್ಲಿರುವ ಸಿಟಿ ಮಾರುಕಟ್ಟೆಗೆ ಸ್ವಯಂಪ್ರೇರಣೆಯಿಂದ ಸ್ಥಳಾಂತರಗೊಳ್ಳುವಂತೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಪರಿಸರ ಇಂಜಿನಿಯರ್ ಚೇತನನಾಯ್ಕ, ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ್, ತಳವಾರ ಶೋಭಾ, ರಾಧಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net