

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸ.ಹಿ.ಪ್ರಾ.ಶಾಲೆ ಮೈದಾನದಲ್ಲಿ ಯುವ ಸೇವಾ ಸಂಘ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೈಸೂರು ತಂಡ ಪ್ರಥಮ, ಉಜಿರೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿವೆ.
ಎರಡು ದಿನಗಳ ಮಹಿಳಾ ಮತ್ತು ಪುರುಷರ ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಪುರುಷರ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಮತ್ತು ಮಹಿಳಾ ವಿಭಾಗದಲ್ಲಿ ಮೈಸೂರಿನ ವಂಶಿ ಕನ್ಸಟ್ರಕ್ಷನ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡವು.
ಮಹಿಳಾ ವಿಭಾಗದಲ್ಲಿ ಮೈಸೂರು (ಪ್ರಥಮ), ಉಜಿರೆಯ ಎಸ್‌ಡಿಎಂ (ದ್ವೀತಿಯ), ಬೆಂಗಳೂರು ತಂಡ (ತೃತೀಯ) ಸ್ಥಾನ ಪಡೆದುಕೊಂಡರೆ, ಆಟಗಾರರಾದ ಸ್ವಾತಿ, ಪ್ರಿಯಾಂಕಾ ಮತ್ತು ಇಂಚನಾ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ (ಪ್ರಥಮ), ಆಳ್ವಾಸ್(ದ್ವೀತಿಯ), ಶ್ರೀರಾಮನಗರ (ತೃತೀಯ) ಸ್ಥಾನ ಪಡೆದುಕೊಂಡರೆ, ರಾಹುಲ್, ಮಾಲತೇಶ ಮತ್ತು ಆಫ್ರೀದಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ವಿಜೇತ ತಂಡಗಳಿಗೆ ನಗದಿನೊಂದಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಉತ್ತಮ ಸಮಾಜ ನಿರ್ಮಿಸುತ್ತಿದ್ದು, ಎರಡು ದಿನಗಳ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದರು.
ಯುವ ಸೇವಾ ಸಂಘದ ಕಾರ್ಯಚಟುವಟಿಕೆ ಕುರಿತು ಸಂಘದ ಅಧ್ಯಕ್ಷ ಕೆ.ಪವನ್ ಮಾತನಾಡಿದರು. ಮುಖಂಡ ಸುಬ್ರಮಣ್ಯೇಶ್ವರರಾವ್ ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು.