ಶ್ರೀರಾಮನಗರದ ಪಿಎಸ್ಸೆಸ್ಸೆನ್‌ದಲ್ಲಿ ₹ 1.4 ಕೋಟಿ ಅವ್ಯವಹಾರ

Gangavathi Sriramnagar pssn office
ಗಂಗಾವತಿ ತಾಲೂಕಿನ ಶ್ರೀರಾಮನಗರದ ಪಿಎಸ್ಸೆಸ್ಸೆನ್ ಕಚೇರಿ. ಸಹಕಾರದಲ್ಲಿ ಹಣ ದುರ್ಬಳಕೆಯ ಸೂಚನಾ ಪತ್ರ.
Published on

ಗಂಗಾವತಿ : ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಪಿಎಸ್ಸೆಸ್ಸೆನ್) 1.4 ಕೋಟಿ ರೂ. ಅವ್ಯವಹಾರ ನಡೆದಿದ್ದು, ಸಿಇಒ ವೈ.ಸ್ವರ್ಣಪ್ರಕಾಶ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಹಕಾರ ಇಲಾಖೆ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.

ಪಿಎಸ್ಸೆಸ್ಸೆನ್‌ನ 2017ರಿಂದ 2024ರವರಿಗೂ ನಡೆದ ಲೆಕ್ಕ ಪತ್ರ ಆಡಿಟ್ ವರದಿಯಲ್ಲಿ 1.04 ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರವಾಗಿದ್ದು, ನಿರ್ವಹಣೆ ಲೋಪದೋಷದಲ್ಲಿ ಭಾಗಿಯಾದ ಸಿಇಒ ವೈ. ಸ್ವರ್ಣಪ್ರಕಾಶ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಹಕಾರ ಇಲಾಖೆ ಸೂಚನೆ ನೀಡಿದ್ದು, ಅನುಪಾಲನಾ ವರದಿ ಸಲ್ಲಿಸಲು ಆಡಳಿತ ಮಂಡಳಿಗೆ ಸೂಚಿಸಿದೆ.ಪಿಎಸ್ಸೆಸ್ಸೆನ್‌ನಲ್ಲಿ ಅವ್ಯವಹಾರವಾಗಿರುವ ಬಗ್ಗೆ 2024ರಲ್ಲಿ ಆಡಳಿತ ಮಂಡಳಿ ಪತ್ತೆ ಹಚ್ಚಿದ್ದು, ಪರಿಶೀಲನೆಗೆ ಸಹಕಾರ ಇಲಾಖೆ ಗಮನಕ್ಕೆ ತಂದಿತ್ತು. ಬಿಡಿಪಿ, ಕೆಸಿಸಿ, ಮುದ್ದತ್ತು ಠೇವಣಿ, ಉಳಿತಾಯ ಠೇವಣಿ ಮತ್ತು ಸ್ವ ಸಹಾಯ ಸಂಘಗಳ ಉಳಿತಾ ಠೇವಣಿ ಹಣ ದುರ್ಬಳಕೆಯಾಗಿರುವುದು ಪತ್ತೆಯಾಗಿದೆ.

ಬಿಡಿಪಿ ವ್ಯವಹಾರದಲ್ಲಿ 24,64,369 ರೂ., ಕೆಸಿಸಿ ವ್ಯವಹಾರದಲ್ಲಿ 72,45,135ರೂ., ಮುದ್ದತ್ತು ಠೇವಣಿಯಲ್ಲಿ 5,84,100ರೂ., ಉಳಿತಾಯ ಠೇವಣಿಯಲ್ಲಿ 1,27,000ರೂ., ಮತ್ತು ಸ ್ವಸಹಾಯ ಸಂಘಗಳ ಉಳಿತಾಯ ಠೇವಣಿ 55, 143ರೂ. ದುರ್ಬಳಕೆಯಾಗಿದೆ. ಸಂಘದ ಹಣವನ್ನು ಇಚ್ಛಾನುಸಾರ ದುರ್ಬಳಕೆ ಮಾಡಿಕೊಂಡ ಸಿಇಒ ವೈ.ಸ್ವರ್ಣಪ್ರಕಾಶ, ಸದ್ಯಕ್ಕಂತೂ ಕೆಲಸದಲ್ಲಿಲ್ಲ. ಸಿಇಒರಿಂದ ದುರ್ಬಳಕೆ ಹಣ ವಸೂಲಿ ಮಾಡುವುದರ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಪಾಲನೆಯಾಗದ ಆದೇಶ

ಪಿಎಸ್ಸೆಸ್ಸೆನ್‌ಗೆ ನಾಲ್ಕುಬಾರಿ ಅಧ್ಯಕ್ಷರಾಗಿದ್ದ ಗಾರಪಾಟಿ ರಾಮಕೃಷ್ಣ ಆಡಳಿತಾವಧಿಯಲ್ಲಿ ಹೆಚ್ಚು ಅವ್ಯವಹಾರವಾಗಿದ್ದು, ಲೆಕ್ಕ ತಪಾಸಣೆ, ಆಡಿಟ್ ವರದಿ ಪರಿಶೀಲಿಸದಿರುವುದು ಮತ್ತು ಸದಸ್ಯರ ಆಕ್ಷೇಪಣೆ ಮಧ್ಯೆಯೂ ಮೌನಕ್ಕೆ ಜಾರಿದ್ದು ಹಣ ದುರ್ಬಳಕೆಗೆ ಕಾರಣ ಎನ್ನಲಾಗಿದೆ. ಸಹಕಾರ ಸಂಘಗಳ ಕಾಯ್ದೆ 1959 ಕಲಂ 65 ಪರಿವೀಕ್ಷಣೆ ವರದಿಯಲ್ಲಿ ನ್ಯೂನತೆಗಳ ಕುರಿತು ಸೂಕ್ತ ಕ್ರಮಕೈಗೊಂಡು 45 ದಿನದಲ್ಲಿ ಅನುಪಾಲನಾ ವರದಿ ಸಲ್ಲಿಸಲು ಸಹಕಾರ ಇಲಾಖೆ ಆದೇಶಿಸಿದರೂ ಇದುವರಿಗೂ ಪಾಲನೆ ಮಾಡಿಲ್ಲ. ದುರ್ಬಳಕೆ ಹಿನ್ನೆಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಸಾಲ ನೀಡಿಲ್ಲ, ಆದರೆ ಸಾಲವಸೂಲಾತಿಗೆ ಆದ್ಯತೆ ನೀಡಲಾಗಿದೆ.

ಅನಧಿಕೃತ ಗೈರು

ಪಿಎಸ್ಸೆಸ್ಸೆನ್‌ನಲ್ಲಿ ಅವ್ಯವಹಾರವಾಗಿರುವ ಬಗ್ಗೆ ಆಡಳಿತ ಮಂಡಳಿ ಪತ್ತೆ ಹಚ್ಚುತ್ತಿದ್ದಂತೆ ಸಿಇಒ ವೈ.ಸ್ವರ್ಣಪ್ರಕಾಶ ಕಳೆದ 10 ತಿಂಗಳಿಂದ ಅನಧಿಕೃತ ಗೈರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ನೋಟಿಸ್ ನೀಡಿದರೂ ಉತ್ತರ ಬಂದಿಲ್ಲ. ಗ್ರಾಮೀಣ ಠಾಣೆಯಲ್ಲಿ 2024ರಲ್ಲಿ ಸಿವಿಲ್ ಪ್ರಕರಣ ದಾಖಲಿಸಲು ಅಡಳಿತ ಮಂಡಳಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಹಕಾರ ಇಲಾಖೆ ಆದೇಶದನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅಧ್ಯಕ್ಷ ಪೊಟ್ಲೂರಿ ವೆಂಕಟೇಶ್ವರರಾವ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net