

ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಂಕರಮಠ ಮತ್ತು ಶಾರದಾಂಬೆ ದೇವಾಲಯದ 7ನೇ ವರ್ಷದ ಪ್ರತಿಷ್ಠಾಪನೆ ದಿನ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ದೇವಾಲಯ ಮತ್ತು ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಶ್ರೀ ಶಾರದಾಂಬೆ ಸೇರಿ ಪರಿವಾರದ ಮೂರ್ತಿಗಳಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು.
ಶಾರದಾ ಶಂಕರ ಭಕ್ತ ಮಂಡಳಿ, ವಿಜಯಧ್ವಜ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗದಿಂದ ಲಲಿತ ಸಹಸ್ರನಾಮ ಪಾರಾಯಣ, ಸಾಮೂಹಿಕ ಕುಂಕುಮಾರ್ಚನೆ, ಅಷ್ಟೋತ್ತರ ಪಾರಾಯಣ ಮತ್ತು ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಐವರು ಮಹಿಳಾ ಸಾಧಕರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಶಂಗೇರಿಯ ಉಭಯ ಶ್ರೀಗಳಿಂದ ಪ್ರತಿಷ್ಠಾಪನೆಗೊಂಡ ದೇವಾಲಯ ಮತ್ತು ಶ್ರೀಮಠದಿಂದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಖಿ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಗುಣಮಟ್ಟದ ಶಿಕ್ಷಣ, ಸಂಸ್ಕಾರ ಹಾಗೂ ಸನಾತನ ಸಂಸ್ಕೃತಿ ಸಂರಕ್ಷಿಸುವಂತೆ ಸಲಹೆ ನೀಡಿದರು.
ವಿವಿಧ ಭಜನಾ ಮಂಡಳಿ ಸದಸ್ಯರಾದ ಶ್ರೀದೇವಿ ಪುರಾಣಿಕ, ಆರತಿ ಅಳವಂಡಿಕರ್, ರಮಾಬಾಯಿ, ವಿದ್ಯಾಬಾಯಿ ವೈದ್ಯ, ಶಕುಂತಲಾ ಕುಲ್ಕರ್ಣಿ, ಅಂಜನಾ ಅಜಿತ್ ಅಳವಂಡಿಕರ್ ಇತರರಿದ್ದರು.