ವಿರೋಧದ ನಡುವೆ ಲಕ್ಷ್ಮೀನಾರಾಯಣ ಕೆರೆ ಸರ್ವೇ

Gangavathi Lake sarve
ಗಂಗಾವತಿ: ತಾಲೂಕಿನ ಸಂಗಾಪುರದ ಶ್ರೀ ಲಕ್ಷ್ಮೀನಾರಾಯಣ ಕೆರೆ ಒತ್ತುವರಿ ಪ್ರದೇಶದ ಸರ್ವೇ ಕಾರ್ಯವನ್ನು ಒತ್ತುವರಿದಾರರ ವಿರೋಧದ ನಡುವೆ ಶುಕ್ರವಾರ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಯಿತು.
Published on

ಗಂಗಾವತಿ: ತಾಲೂಕಿನ ಸಂಗಾಪುರದ ಶ್ರೀ ಲಕ್ಷ್ಮೀನಾರಾಯಣ ಕೆರೆ ಒತ್ತುವರಿ ಪ್ರದೇಶದ ಸರ್ವೇ ಕಾರ್ಯವನ್ನು ಒತ್ತುವರಿದಾರರ ವಿರೋಧದ ನಡುವೆ ಶುಕ್ರವಾರ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಯಿತು.

ತಾಲೂಕಿನ ಸಂಗಾಪುರದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಸ.ನಂ.48ರಲ್ಲಿ 42.21ಎಕರೆ ವ್ಯಾಪ್ತಿಯಲ್ಲಿ ಕೆರೆ ನಿರ್ಮಿಸಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆ ಉಳಿಸುವುದಕ್ಕಾಗಿ ಶ್ರೀ ಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದವರು ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ಸರ್ವೇ ಕೈಗೊಂಡ ನಂತರ ಇತ್ಯರ್ಥಕ್ಕೆ ಕಂದಾಯ ಇಲಾಖೆ ಸೂಚನೆ ನೀಡಿತ್ತು. ಜು.1ರಂದು ಸರ್ವೇಗೆ ಅವಕಾಶ ಕಲ್ಪಿಸಿದ್ದರೂ ಒತ್ತುವರಿದಾರರು ವಿರೋಧಿಸಿದ್ದರಿಂದ ಮತ್ತು ಪೊಲೀಸ್ ಬಂದೋಬಸ್ತ್ ಇಲ್ಲದೇ ಬಂದಿದ್ದರಿಂದ ಸಮೀಕ್ಷೆ ಮುಂದೂಡಲಾಗಿತ್ತು. ಜಿಲ್ಲಾಡಳಿತ ಸೂಚನೆಯಂತೆ ಕಂದಾಯ, ಗ್ರಾಪಂ, ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಕೈಗೊಳ್ಳಲಾಗಿದೆ. ಡ್ರೋಣ್ ಮತ್ತು ಡಿಜಿಟಲ್ ಸರ್ವೇಗೆ ಒತ್ತುವರಿದಾರರು ವಿರೋಧಿಸಿದರೂ ಪೊಲೀಸ್ ಬಂದೋಬಸ್ತ್‌ನಲ್ಲಿ ಮುಂದುವರಿಸಲಾಯಿತು.

ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಖಮರ್ ಪಾಶಾ ಮಾತನಾಡಿ, ಒತ್ತುವರಿದಾರರನ್ನು ತೆರವುಗೊಳಿಸಬೇಕಿದ್ದು, ಉಳಿದ ಭೂಮಿ ಕೆರೆಗಾಗಿ ಮೀಸಲಿಡಬೇಕು. ಒತ್ತುವರಿ ಮಾಡಿಕೊಂಡ 8ಭೂ ಮಾಲೀಕರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ್ದರೂ ಒಬ್ಬರು ಹಾಜರಾಗಿಲ್ಲ. ಬದಲಿಗೆ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲೆತ್ನಿಸುತ್ತಿದ್ದಾರೆ ಎಂದರು.

ಸರ್ವೇ ಅಧಿಕಾರಿ ರಫಿಕ್, ಕಂದಾಯ ನಿರೀಕ್ಷಕ ಬಷೀರುದ್ದೀನ್, ವಿಎ ಸಂಗೀತಾ, ನೀರಾವರಿ ಇಲಾಖೆ ನಂ.1 ವಿಭಾಗದ ಎಇಇ ಅಮರೇಶ, ಎಇ ಅಮರೇಶ, ರೈತರಾದ ಸುಂದರರಾಜು, ಸುಬ್ಬರಾವ್, ಗೋವಿಂದಪ್ಪ, ಮುಸ್ತಾ ಪಠಾಣ, ವಲೀಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net