

ಗಂಗಾವತಿ: ಸದ್ಭಾವನ ಪಾದಯಾತ್ರೆ ಮೂಲಕ ವೀರಶೈವ ಲಿಂಗಾಯತರು ಒಗ್ಗಟ್ಟಾಗಬೇಕಿದ್ದು, ಒಳ ಪಂಗಡಗಳ ವ್ಯಾಮೋಹದಿಂದ ಹೊರ ಬರುವಂತೆ ಕಲ್ಮಠದಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ 158ನೇ ಜಯಂತ್ಯುತ್ಸವ ನಿಮಿತ್ತ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ
ಲಿಂಗಾಯತ ಮಹಾಸಭಾ ವಿವಿಧ ಮಠಾಧೀಶರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ ತಿಂಗಳಲ್ಲಿ ಶಿವಯೋಗ ಮಂದಿರದ ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಳ ಜಯಂತ್ಯುತ್ಸವವನ್ನು 11 ದಿನ ಹಮ್ಮಿಕೊಳ್ಳಲಾಗುತ್ತಿದ್ದು, ಸದ್ಭಾವನ ಪಾದಯಾತ್ರೆ ಮೂಲಕ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಒಳಪಂಗಡಗಳ ವ್ಯಾಮೋಹದಿಂದ ಇಂದು ಸಮಾಜದ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಒಗ್ಗಟ್ಟು ಇಲ್ಲದಂತಾಗಿದೆ. ಮುಂದಿನ ಪೀಳಿಗೆಗಾಗಿ ವೀರಶೈವ ಸಮಾಜವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸದ್ಭಾವನಾ ಯಾತ್ರೆ ಜರುಗಲಿದ್ದು, ದುಶ್ಚಟದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ದುಶ್ಚಟಗಳನ್ನು ಜೋಳಿಗೆಗೆ ಹಾಕುವಂತೆ ಮನವೊಲಿಸಲಾಗುವುದು. ರಾಜ್ಯದ 150ಕ್ಕೂ ಹೆಚ್ಚು ಮಠಾಧೀಶರು
ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಯಂತ್ಯುತ್ಸವ ಯಶಸ್ವಿಗೊಳಿಸಲು ಎಲ್ಲ ಸಮುದಾಯದವರ ಪಾಲ್ಗೊಳ್ಳುವಿಕೆ ಮುಖ್ಯ ಎಂದರು. ಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರು ಮಾತನಾಡಿದರು.
ಅಕ್ಕಿಆಲೂರು ವಿರಕ್ತ ಮಠದ ಶಿವಬಸವ ಸ್ವಾಮೀಜಿ, ನಿಡಶೇಸಿ ಗೆಜ್ಜೆಬಾವಿ ಮಠದ ಕರಿಬಸವ ಶಿವಾಚಾರ್ಯರು, ಬಟಗುರ್ಕಿಯ ಗದುಗೆಯ್ಯ ಸ್ವಾಮೀಜಿ, ಮೈಸೂರಿನ ನಿರಂಜನ ಸ್ವಾಮೀಜಿ, ದುಮ್ಮವಾಡದ ಸರ್ಪಭೂಷಣ ಸ್ವಾಮೀಜಿ, ದೋಟಿಹಾಳ್ ಚಂದ್ರಶೇಖರ್ ಸ್ವಾಮೀಜಿ, ಆರಾಳ್ ಶರಣಬಸವ ದೇವರು, ಮಹಾಸಭಾ ತಾಲೂಕಾಧ್ಯಕ್ಷ ಎಚ್.ಎಸ್.ಗಿರೇಗೌಡ, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷ ಅಶೋಕಸ್ವಾಮಿ ಹಿರೇಮಠ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಮುಖಂಡರಾದ ಕೆ.ಚನ್ನಬಸಯ್ಯಸ್ವಾಮಿ, ಎಚ್.ಎಂ.ಸಿದ್ರಾಮಯ್ಯಸ್ವಾಮಿ, ವೀರಯ್ಯಸ್ವಾಮಿ ಹಿರೇಮಠ, ಕವಿತಾ ಗುರುಮೂರ್ತಿ, ನಂದಿನಿ ಮುದ್ಗಲ್ ಇತರರಿದ್ದರು.
ಸಂಸ್ಕಾರ ಮತ್ತು ಶಿಕ್ಷಣ ಕ್ಷೇತ್ರದ ಮೂಲಕ ಸಮಾನತೆಗೆ ಆದ್ಯತೆ ನೀಡಿದ್ದ ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ 158ನೇ ಜಯಂತ್ಯುತ್ಸವವನ್ನು ಎಲ್ಲ ಸಮುದಾಯದ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು.
ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ
ಕಾಡಾ ಮಾಜಿ ಅಧ್ಯಕ್ಷ ಹಾಗೂ ಸಮಿತಿ ಹಿರಿಯ ಸದಸ್ಯ