

ಗಂಗಾವತಿ: ರೌಡಿಶೀಟರ್‌ಗಳು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಅವರ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂದು ಎಸ್ಪಿ ಟಿ.ಶ್ರೀಧರ್ ಹೇಳಿದರು.
ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮತ್ತು ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಮಂಗಳವಾರ ಪರೇಡ್‌ಗೊಳಪಡಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 1200 ಜನರು ಅಪರಾಧ ಕೃತ್ಯದ ಪ್ರಕರಣದಲ್ಲಿದ್ದಾರೆ. ಪರೇಡ್ ಮೂಲಕ ಅವರ ಚಲವಲನ ಗಮನಿಸಲಾಗುತ್ತಿದ್ದು, ಮಾಸಿಕ ಗೌಪ್ಯ ವರದಿ ಸಂಗ್ರಹಿಸಲಾಗುತ್ತಿದೆ ಎಂದರು.
ಮನಪರಿವರ್ತನೆಯಾದವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲು ಪರಾಮರ್ಶಿಸಲಾಗುತ್ತಿದೆ. ಬದಲಾಗಿ ಬದುಕು ಕಟ್ಟಿಕೊಂಡವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ. ಇಲ್ಲಿವರೆಗೂ 385ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಮುಕ್ತಗೊಳಿಸಲಾಗಿದೆ ಎಂದರು. ನಗರ ಠಾಣೆ ವ್ಯಾಪ್ತಿಯಲ್ಲಿ 252, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 75 ರೌಡಿಶೀಟರ್‌ಗಳಿದ್ದು, ಪರೇಡ್‌ನಲ್ಲಿ 80 ರೌಡಿಶೀಟರ್‌ಗಳು ಭಾಗವಹಿಸಿದ್ದರು.
ಮಕ್ಕಳು ದೊಡ್ಡವಾಗ್ಯಾವ ಕೆಟ್ಟ ಚಟ ಬಿಡ್ರೀ…
ಮಂಗಳವಾರ ಮಧ್ಯಾಹ್ನ ಒಂದು ಗಂಟೆಯಿಂದಲೇ ರೌಡಿಶೀಟರ್‌ಗಳನ್ನು ಠಾಣೆಯಲ್ಲಿ ನಿಲ್ಲಿಸಿ ಪ್ರತಿಯೊಬ್ಬರ ಉದ್ಯೋಗ ಮತ್ತು ಇತರ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲಾಯಿತು. ವಯಸ್ಸಾದ ಅಪರಾಧಿಗಳಿಗೆ, ಮಕ್ಕಳು ದೊಡ್ಡವಾಗ್ಯಾವ, ಎಲ್ಲ ಕೆಟ್ಟ ಚಟ ಬಿಡುವಂತೆ ಎಸ್ಪಿ ಶ್ರೀಧರ್ ಎಚ್ಚರಿಕೆ ನೀಡಿದರು. ಮಟ್ಕಾ, ಗಾಂಜಾ ಸೇರಿದಂತೆ ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದವರಿಗೂ ಬದುಕಿನ ಪಾಠ ಹೇಳಿದರು. ಗಣೇಶ, ಅಯ್ಯಪ್ಪಸ್ವಾಮಿ ಮತ್ತು ಹನುಮಮಾಲೆ ಧರಿಸಿದ್ದ ಕೆಲವರು ಕೂಡ ಅಪರಾಧಿಕ ಹಿನ್ನೆಲೆ ಹೊಂದಿದ್ದರಿಂದ ಪರೇಡ್‌ನಲ್ಲಿ ಭಾಗವಹಿಸಿದ್ದರು.