ಬಾಂಧವ್ಯ ವೃದ್ಧಿಸುವ ಜಾನಪದ ಕಡೆಗಣನೆ ಸಲ್ಲ

folk festival
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಜಾನಪದ ಗಾಯಕ ಮತ್ತು ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಮಹೆಬೂಬ್ ಕಿಲ್ಲೇದಾರ್ ಸೋಮವಾರ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ, ವೇದಿಕೆ ಸಂಚಾಲಕಿ ಪ್ರೊ.ಜಗದೇವಿ ಎಂ.ಕಲಶೆಟ್ಟಿ ಇತರರಿದ್ದರು.
Published on

ಗಂಗಾವತಿ: ಆಧುನಿಕತೆ ಭರಾಟೆಯಲ್ಲಿ ಸಂಸ್ಕಾರ ನೀಡಿದ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮರೆಯುತ್ತಿದ್ದೇವೆ ಎಂದು ಜಾನಪದ ಗಾಯಕ ಮತ್ತು ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಮಹೆಬೂಬ್ ಕಿಲ್ಲೇದಾರ್ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಹುಮುಖಿ ಸಾಂಸ್ಕೃತಿಕ ವೇದಿಕೆಯಿಂದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಪರಿಕಲ್ಪನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಂಧವ್ಯ ವೃದ್ಧಿಸುವ, ಭವಿಷ್ಯ ರೂಪಿಸುವ ಜಾನಪದ ಸಾಹಿತ್ಯ ಎಲ್ಲ ಪ್ರಕಾರಗಳಲ್ಲಿ ನೋಡಬಹುದಾಗಿದೆ. ಸಂಪ್ರದಾಯ, ಹಬ್ಬಕ್ಕೆ ತಕ್ಕಂತೆ ಸಾಹಿತ್ಯ ರಚನೆಯಾಗಿದ್ದು, ಹಿರಿಯರನ್ನು ಗೌರವಿಸುವ ವಿಚಾರಗಳಿವೆ. ಪ್ರೀತಿ, ಮಮತೆ, ಅಂತಃಕರಣ, ಸಂಸ್ಕಾರ, ಸಂಪ್ರದಾಯ ಸೇರಿ ಹಲವು ಪ್ರಕಾರಗಳನ್ನು ಮಾನವೀಯ ಮೌಲ್ಯಗಳೊಂದಿಗೆ ರಚಿಸಲಾಗಿದೆ. ಇತ್ತೀಚಿನ ಅಶ್ಲೀಲ ಜಾನಪದ ಸಾಹಿತ್ಯದಲ್ಲಿ ಪರಂಪರೆಯ ಜಾನಪದ ಸಾಹಿತ್ಯ ಮರೆಯಾಗುತ್ತಿದೆ. ಯುವ ಸಮುದಾಯ ಜಾನಪದ ಸಾಹಿತ್ಯ ಮತ್ತು ಕಲೆಯನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.

ವೇದಿಕೆ ಸಂಚಾಲಕಿ ಪ್ರೊ.ಜಗದೇವಿ ಎಂ.ಕಲಶೆಟ್ಟಿ ಮಾತನಾಡಿ, ಸಂಸ್ಕಾರಯುತ ಕುಟುಂಬ ನಿರ್ಮಾಣದಲ್ಲಿ ಜಾನಪದ ಸಾಹಿತ್ಯದ ಕೊಡುಗೆ ಸಾಕಷ್ಟಿದ್ದು, ಬಾಂಧವ್ಯ ಹೆಚ್ಚಿಸುವ ಸಾಹಿತ್ಯ ಕಾಣಬಹುದಾಗಿದೆ. ಉತ್ಸವ ಆಚರಣೆ ಮೂಲಕ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಿಸಲಾಗುತ್ತಿದೆ ಎಂದರು.

ಗಾಯಕ ಮಹೆಬೂಬ್ ಕಿಲ್ಲೇದಾರ್ ಪ್ರಸ್ತುತಪಡಿಸಿದ ಜಾನಪದ ಗಾಯನ ಗಮನಸೆಳೆಯಿತು. ನಂತರ ವಿದ್ಯಾರ್ಥಿಗಳಿಗಾಗಿ ಸಂಪ್ರದಾಯ ನೃತ್ಯ ಮತ್ತು ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ, ಐಕ್ಯೂಎಸಿ ಸಂಯೋಜಕ ಡಾ.ಎಸ್.ಜಿ.ಗುರಿಕಾರ್, ಸಹ ಪ್ರಾಧ್ಯಾಪಕರಾದ ಅಣ್ಣೋಜಿರೆಡ್ಡಿ, ಪಂಚಾಕ್ಷರಿ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net