ರಸ್ತೆ ಕಾಮಗಾರಿ ಪೂರ್ಣಗೊಳಿಸಿ

Untitled design(9)
Published on

ಗಂಗಾವತಿ: ತಾಲೂಕಿನ ಸಿದ್ದಿಕೇರಿ, ಬಸಾಪಟ್ಟಣ ಸಂಪರ್ಕ ರಸ್ತೆ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸಂಪರ್ಕ ರಸ್ತೆ ವ್ಯಾಪ್ತಿಯ ನಿವಾಸಿಗಳು ನಗರದ ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

ನಿವಾಸಿಗಳಾದ ಅರ್ಜುನ ನಾಯಕ, ಮಳ್ಳಿಕೇರಿ ಮಂಜುನಾಥ ನಾಯಕ ಮಾತನಾಡಿ, ಉದ್ದೇಶಿತ ರಸ್ತೆಯು ಸಿದ್ದೀಕೇರಿ ಕ್ಯಾಂಪ್, ಕಲ್ಲಪ್ಪನ ಕ್ಯಾಂಪ್, ಕರೇಕಲ್ ಕ್ಯಾಂಪ್, ಹೊಸಮಲಿಕ್ಯಾಂಪ್, ಸೂರ್ಯನಾಯಕನತಾಂಡಾ ಸೇರಿ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ರೈತರ ಹೊಲಗಳಿಗೆ ಸಂಚರಿಸುವ ಏಕೈಕ ಮಾರ್ಗವಾಗಿದೆ. ಹಲವು ವರ್ಷಗಳಿಂದ ಇದೇ ರಸ್ತೆಯನ್ನು ಸಂಚಾರಕ್ಕೆ ಬಳಕೆ ಮಾಡಲಾಗುತ್ತಿದೆ. ದುರಸ್ತಿಗಾಗಿ ಎಸ್‌ಟಿಪಿ ಟಿಎಸ್‌ಪಿ ಯೋಜನೆಯಡಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವರು ರಸ್ತೆ ಸ್ವಂತ ಮಾಲೀಕತ್ವದಲ್ಲಿ ಎಂದು ಕೋರ್ಟ್ ಮೆಟ್ಟಿಲೇರಿದ್ದು, ತಕರಾರು ತೆಗೆದಿದ್ದಾರೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ವಾಹನ ಸವಾರರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ, ರಸ್ತೆ ದುರಸ್ತಿ ಕಾಮಗಾರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಪಿಡಬ್ಲುೃಡಿ ಸಹಾಯಕ ಮಹಾದೇವಪ್ಪ, ನಗರಸಭೆ ಲೆಕ್ಕಾಧಿಕಾರಿ ಮಂಜುನಾಥಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವಿವಿಧ ಗ್ರಾಮದ ನಿವಾಸಿಗಳಾದ ಜೋಗದ ವಸಂತನಾಯಕ, ಬಿ.ರಾಮುಲು, ಜೋಗದ ದುರುಗಪ್ಪ ನಾಯಕ, ಹೊಸ್ಮಲಿ ರಮೇಶನಾಯಕ, ಭಾಗಣ್ಣ, ಹತ್ತಿಮರದ ಭಾಗ್ಯವಂತನಾಯಕ, ಮಂಜುನಾಥ ನಾಯಕ ಕೋಲ್ಕಾರ್, ಹರೀಶ ನಾಯಕ ಸಿದ್ದಿಕೇರಿ, ರವಿ ಗುಡ್ಡೇಕರ್, ರವಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net