

ಗಂಗಾವತಿ: ತಾಲೂಕಿನ ವಿರುಪಾಪುರದ ಕಿರುಚಿತ್ರ ನಿರ್ದೇಶಕ ಜಿ.ಮುರಳೀಧರ ಅವರು ವಿದೇಶಿ ಮಹಿಳೆಯನ್ನು ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಮುರಳೀಧರ ವರಿಸಿರುವ ಲಂಡನ್ ಮೂಲದ ಬರಹಗಾರ್ತಿ ಚಾರ್‌ಲೊಟ್ಟಿ ಫಿಂಕ್ಲರ್ ಸಹ ಕಿರುಚಿತ್ರಗಳ ನಿರ್ದೇಶನ ಮತ್ತು ಬರವಣಿಗೆ ಕ್ಷೇತ್ರದವರು ಎಂಬುದು ವಿಶೇಷ. ಇವರಿಬ್ಬರು ಉಪನೋಂದಣಿ ಕಚೇರಿಯಲ್ಲಿ ಗುರುವಾರ ನೋಂದಣಿ ಮಾಡಿಸಿದರು.
ಇಬ್ಬರಿಗೂ ಸಿನಿಮಾ, ಕಿರುಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿಯಿದ್ದು, ಎರಡು ವರ್ಷಗಳ ಹಿಂದೆ ಜಿ.ಮುರಳೀಧರ ನಿರ್ಮಿಸುತ್ತಿದ್ದ ಐ ಲವ್ ಮೈ ಕಂಟ್ರಿ ಕಿರುಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾದ ಲಂಡನ್ ಮೂಲದ ಯುವತಿ ಚಾರ್‌ಲೊಟ್ಟಿ ಫಿಂಕ್ಲರ್ ಜತೆಯಾಗಿದ್ದರು. ಕ್ರಮೇಣ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು, ಒಟ್ಟೊಟ್ಟಿಗೆ ನಿರ್ದೇಶನ, ಬರವಣಿಗೆ, ಚಿತ್ರ ನಿರ್ಮಾಣದತ್ತ ಅಸಕ್ತಿ ಹೆಚ್ಚಿಸಿಕೊಂಡಿದ್ದಾರೆ. ವಿರುಪಾಪುರ ಜಿ.ಮುರಳೀಧರ ಇತ್ತೀಚಿಗೆ ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಗೆಸ್ಟ್ ಹೌಸ್ ನಿರ್ಮಿಸಿದ್ದು, ಅಲ್ಲಿಯೇ ಇಬ್ಬರು ಚಿತ್ರ ನಿರ್ಮಾಣ ಕುರಿತು ಚರ್ಚಿಸುತ್ತಿದ್ದರು. ಕುಟುಂಬದ ಆಪ್ತರು, ಗೆಳೆಯರ ಸಮ್ಮುಖದಲ್ಲಿ ನಗರದ ಉಪನೋಂದಣಿ ಕಚೇರಿಯಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇಬ್ಬರು ಸೇರಿ ಲೊಟ್ಟಿ ಫಿಂಕ್ಲರ್ ಎಂಟರ್ಟೇನ್ಮೆಂಟ್ ಎಂಬ ಪ್ರೋಡೊಕ್ಷನ್ ಆರಂಭಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗಳಿಗೆ ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುವ ಕನಸು ಹೊಂದಿದ್ದಾರೆ. ವಿರುಪಾಪುರಗಡ್ಡೆ ಭಾಗದಲ್ಲಿ ಇಂಡಿಯಾ ವೆಡ್ಸ್ ಲಂಡನ್ ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸುವ ಚಿಂತನೆ ಹೊಂದಿದ್ದಾರೆ.