

ಗಂಗಾವತಿ: ಮಹಿಳಾ ಸ್ವಾವಲಂಬನೆಗೆ ಪೂರಕ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಅಧಿಕಾರಾವಧಿಯ ಮೂರು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗುರುವಾರ ಹಮ್ಮಿಕೊಂಡಿದ್ದ ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ತಿಳಿಸಿದಂತೆ ಮಹಿಳೆಯರಿಗಾಗಿ ಗಾರ್ಮೆಂಟ್ ್ಯಾಕ್ಟರಿ ಆರಂಭಿಸಲಾಗಿದ್ದು, ಈಗಾಗಲೇ ಸಿಬಿಎಸ್ ಗಂಜ್ ಆವರಣದಲ್ಲಿ ಮೊದಲ ಹಂತದ ಟೈಲರಿಂಗ್ ತರಬೇತಿ ಕೇಂದ್ರ ತೆರೆಯಲಾಗಿದೆ.
ಬಡ ಮಹಿಳೆಯರು ತಿಂಗಳಿಗೆ 20 ಸಾವಿರ ರೂ. ಆದಾಯ ಬರುವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದೇನೆ. ಕುಟುಂಬ ನಿರ್ವಹಿಸುವ ಪ್ರತಿ ಮಹಿಳೆಯು ಸ್ವಾವಲಂಬಿಯಾಗಬೇಕು ಎಂದರು.
38 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಭೋವಿ, ಸಹಾಯಕ ವ್ಯವಸ್ಥಾಪಕ ಗುಂಡಪ್ಪ ಇತರರಿದ್ದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ತಾಲೂಕಿನ ಅರಳಹಳ್ಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮ್ಯಾಚಿಂಗ್ ಗ್ರಾೃಂಟ್ ಯೋಜನೆಯಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 10 ಕೋಟಿ.ರೂ.ವೆಚ್ಚದಲ್ಲಿ ನಿರ್ಮಿಸಿರುವ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನ ಕಟ್ಟಡವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು.
ವೆಂಕಟಗಿರಿ ಹೋಬಳಿಯ ಗಡ್ಡಿಯಿಂದ ಬಂಕಾಪುರದವರೆಗಿನ ಒಂದು ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಜನರಿಂದ ಅಹವಾಲು ಸ್ವೀಕರಿಸಲಾಯಿತು.
ಅರಳಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ದಯ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಅಜ್ಮೀರ್ ಅಲಿ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಪ್ರಾಂಶುಪಾಲ ಸಂಗಮೇಶ, ಮುಖಂಡರಾದ ಮನೋಹರ ಗೌಡ ಹೇರೂರು, ಡಿ.ಕೆ ಆಗೋಲಿ, ಚನ್ನವೀರ ಗೌಡ, ಯಮನೂರ ಚೌಡ್ಕಿ, ವೀರೇಶ್ ಬಲಕುಂದಿ, ಚಂದ್ರು ಹಿರೂರು, ಪಂಪಣ್ಣ ನಾಯಕ, ಜಿಲಾನಿ ಪಾಷಾ, ದುರ್ಗಪ್ಪ ದಳಪತಿ, ವಿರೂಪಾಕ್ಷಗೌಡ ನಾಯಕ, ಲಿಂಗನಗೌಡ ಹೇರೂರು, ವಿಶ್ವನಾಥ ಮಾಲಿ ಪಾಟೀಲ್, ಲಕ್ಷ್ಮಣ ಗೌಡ ಇತರರಿದ್ದರು.
ನಗರದ ಸಮಗ್ರ ಅಭಿವೃದ್ಧಿಯತ್ತ ಗಮನ
ಗಂಗಾವತಿ ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆ ಅನುದಾನ ಕ್ರೋಢೀಕರಿಸಿ ಕಾಮಗಾರಿಗೆ ಚಾಲನೆ ನೀಡಿದ್ದು, ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಆಪ್ತ ಎಂ.ಅಲಿಖಾನ್ ಸ್ಪಷ್ಟ ಪಡಿಸಿದ್ದಾರೆ.
ಕಳೆದೆರೆಡು ವರ್ಷದಿಂದ ವಿವಿಧ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಮತ್ತು ಸಮನ್ವಯ ಸಾಧಿಸುವ ಮೂಲಕ ಅನುದಾನ ಕ್ರೋಢೀಕರಿಸಿದ್ದು, ಇದರ ಭಾಗವಾಗಿ ನಗರದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಬೀದಿ ದೀಪಗಳ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಕಳೆದ ತಿಂಗಳ ಕೋರ್ಟ್ ಪ್ರಕರಣದಿಂದ ಕ್ಷೇತ್ರದಿಂದ ದೂರವಿದ್ದಾಗ, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಜನರಿಗೆ ಅನುಕೂಲವಾಗುವ ಮತ್ತು ಸೌಹಾರ್ದ ಹೆಚ್ಚಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಅದರಂತೆ ಬೀದಿ ದೀಪ ಕಂಬಗಳನ್ನು ಅಳವಡಿಸಲಾಗುತ್ತಿದೆ.
ವಿಳಂಬ ನೀತಿ ಅನುಸರಿಸಿದ ಕೆಆರ್‌ಐಡಿಎಲ್ ಇಂಜಿನಿಯರ್‌ಗಳನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಕಾಲಮಿತಿಯೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಬದಲಾಯ್ತು ವಿನ್ಯಾಸ
ನಗರದ ಪ್ರಮುಖ ರಸ್ತೆಯಲ್ಲಿನ ಬೀದಿ ದೀಪ ಕಂಬಗಳ ವಿನ್ಯಾಸ ಕೊನೆಗೂ ಬದಲಾಗಿದ್ದು, ನಗರಸಭೆ ಮೇ 17ರಂದು ಅನುಮೋದನೆ ನೀಡಿದ ವಿನ್ಯಾಸವನ್ನು ಕೈಬಿಡಲಾಗಿದೆ. ನಗರಾಡಳಿತ ಮಂಡಳಿ ಒಪ್ಪಿದ್ದ ಪಾರಂಪರಿಕ ರೀತಿಯ ವಿಶಿಷ್ಟ ವಿನ್ಯಾಸ ಕಂಬಗಳನ್ನು ತಿರಸ್ಕರಿಸಲಾಗಿದೆ.
ಬದಲಿಸಿದ ವಿನ್ಯಾಸದ ಬಗ್ಗೆ ನಗರಾಡಳಿತದ ಗಮನಕ್ಕೂ ಬಾರದಂತೆ ಕೆಆರ್‌ಐಡಿಎಲ್ ಇಂಜಿನಿಯರ್ ರೂಪಿಸಿದ್ದು, ರೆಡ್ಡಿ ಆಪ್ತರೊಬ್ಬರ ಕೈವಾಡದ ಬಗ್ಗೆ ಸುದ್ದಿಯಾಗಿತ್ತು. ಕೊನೆಗೂ ರೆಡ್ಡಿ ಆಪ್ತರದ್ದೇ ಗೆಲುವಾಗಿದ್ದು, ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಸೋಲಾಗಿದೆ.
3 ಕೋಟಿ ರೂ.ವೆಚ್ಚದ ಬೀದಿ ದೀಪ ಕಂಬಗಳ ನವೀಕರಣ ಕಾಮಗಾರಿ ವಿನ್ಯಾಸ ಗೊಂದಲ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ಸುದ್ದಿ, ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು.