ಮಿನಿಥಿಯೇಟರ್‌ಗಳ ನಿರ್ಮಾಣ ಅವಶ್ಯ, ಚಲನಚಿತ್ರ ನಿರ್ದೇಶಕ ಸಾಯಿಪ್ರಕಾಶ ಹೇಳಿಕೆ

movie poster release
ಗಂಗಾವತಿ ಸರ್ವೇಶ ಸಭಾಂಗಣದಲ್ಲಿ ಸೆಪ್ಟೆಂಬರ್ 10 ಚಿತ್ರ ತಂಡ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಸೋಮವಾರ ಬಿಡುಗಡೆಗೊಳಿಸಲಾಯಿತು. ನಿರ್ದೇಶಕ ಸಾಯಿಪ್ರಕಾಶ, ನಾಯಕನಟ ಜಯಸಿಂಹ, ಪೋಷಕ ನಟ ಗಣೇಶರಾವ್ ಇತರರಿದ್ದರು.
Published on

ಗಂಗಾವತಿ: ಸಣ್ಣ ಮತ್ತು ಮಧ್ಯಮ ವರ್ಗದ ಜನರ ಮನರಂಜನೆಗೆ ಪೂರಕವಾದ ಚಿತ್ರರಂಗ ಉಳಿವಿಗೆ ಸರ್ಕಾರ ಯೋಜನೆ ರೂಪಿಸಬೇಕಿದ್ದು, ಮಿನಿಥಿಯೇಟರ್‌ಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಚಲನಚಿತ್ರ ನಿರ್ದೇಶಕ ಸಾಯಿಪ್ರಕಾಶ ಹೇಳಿದರು.

ನಗರದ ಸರ್ವೇಶ ಸಭಾಂಗಣದಲ್ಲಿ ಸೆಪ್ಟೆಂಬರ್ 10 ಚಿತ್ರದ ತಂಡ ಸೋಮವಾರ ಹಮ್ಮಿಕೊಂಡಿದ್ದ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಯಾನ್ ಇಂಡಿಯಾ ನೆಪದಲ್ಲಿ ಕನ್ನಡ ಚಿತ್ರರಂಗದ ಪ್ರದರ್ಶನ ದುಬಾರಿಯಾಗುತ್ತಿದ್ದು, ಓಟಿಟಿಗಳಲ್ಲಿ ಚಿತ್ರ ನೋಡಬೇಕಾದರೆ ಸಾವಿರಗಟ್ಟಲೇ ಹಣ ಬೇಕಾಗುವುದು. ಚಿತ್ರಗಳನ್ನು ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ವರ್ಗದವರೇ ನೋಡುತ್ತಿರುವುದರಿಂದ ಓಟಿಟಿಯಲ್ಲಿ ನೋಡಲಾಗುತ್ತಿಲ್ಲ. ಹೀಗಾಗಿ ಮಿನಿ ಥಿಯೇಟರ್‌ಗಳ ಮೂಲಕ ಚಿತ್ರ ನೋಡಲು ಅವಕಾಶ ಕಲ್ಪಿಸಬೇಕಿದೆ.

ಸ್ಟಾರ್ ನಟರ ಜತೆಗೆ ಚಿತ್ರಕತೆಯಲ್ಲಿ ಸತ್ವವಿದ್ದಾಗ ಜನರು ಚಿತ್ರ ನೋಡುತ್ತಾರೆ. ಹಳೇ ದಿನಗಳಲ್ಲಿ ಎಲ್ಲದಕ್ಕೂ ಮಾನ್ಯತೆಯಿದ್ದು, ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಜನರಿಗೆ ಹತ್ತಿರವಾಗುವ ಚಿತ್ರಕತೆಯ ಚಿತ್ರಗಳು ಕಡಿಮೆಯಾಗುತ್ತಿವೆ. ಸಾಮಾಜಿಕ ಸಂದೇಶದ ಸೆಪ್ಟೆಂಬರ್ 10 ಚಿತ್ರ ಜುಲೈನಲ್ಲಿ ತೆರೆಗೆ ಬರಲಿದ್ದು, ಪ್ರೋತ್ಸಾಹಿಸಿ ಎಂದರು.

ಪೋಷಕ ನಟ ಗಣೇಶರಾವ್ ಮಾತನಾಡಿ, ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವರಿಗಾಗಿ ಸೆಪ್ಟೆಂಬರ್ 10 ಚಿತ್ರ ತಯಾರಿಸಿದ್ದು, ಆತ್ಮಹತ್ಯೆಯೊಂದೇ ಸಮಸ್ಯೆಗೆ ಪರಿಹಾರವಲ್ಲ. ಪ್ರೀತಿ, ಓದು, ದುಡಿಮೆಯಲ್ಲಿ ವ್ಯತ್ಯಾಸವಾದಾಗ ಆತ್ಮಹತ್ಯೆಗೆ ಯೋಚನೆ ಮಾಡುವರಿಗೆ ಚಿತ್ರ ನಿರ್ಮಿಸಿದ್ದು, ಕುಟುಂಬ ಸಮೇತ ಚಿತ್ರ ನೋಡಬಹುದು ಎಂದರು.

ನಾಯಕ ಜಯಸಿಂಹ, ಕಲಾವಿದರಾದ ವಿಷ್ಣುತೀರ್ಥ ಜೋಶಿ ಆದಾಪುರ, ಶರದ್ ದಂಡಿನ್, ಚನ್ನಬಸವನಗೌಡ, ವಕೀಲ ನಾಗರಾಜ್ ಗುತ್ತೇದಾರ್ ಇತರರಿದ್ದರು.

ಕನ್ನಡ ಚಿತ್ರರಂಗದ ಎಲ್ಲ ನಟರೊಂದಿಗೆ ಚಿತ್ರಗಳನ್ನು ನಿರ್ದೇಶಿಸಿದ್ದು, ಇದುವರೆಗೆ 105 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಪ್ರತಿಯೊಬ್ಬರ ಸಹಕಾರವಿದ್ದಾಗ ಮಾತ್ರ ಚಿತ್ರ ಯಶಸ್ವಿ ಸಾಧ್ಯ.

ಸಾಯಿಪ್ರಕಾಶ, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net