

ಗಂಗಾವತಿ: ವೈದ್ಯರಿಗೆ ಭದ್ರತೆ ಮತ್ತು ರೋಗಿಗಳಿಗೆ ರಕ್ಷಣೆ ಪರಿಕಲ್ಪನೆಯಡಿ ಉತ್ತಮ ಸೇವೆ ಸಲ್ಲಿಸಲಾಗುತ್ತಿದ್ದು, ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಟಿ.ಎ. ವೀರಭದ್ರಯ್ಯ ಹೇಳಿದರು.
ನಗರದ ಅಮರ್ ಗಾರ್ಡನ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಂಘದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ವರ್ಷವಿಡಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ವೈದ್ಯಕೀಯ ಕ್ಷೇತ್ರದ ಪ್ರಗತಿಶೀಲ ವಿಷಯಗಳ ಕುರಿತು ಪರಿಣಿತ ತಜ್ಞರಿಂದ ಉಪನ್ಯಾಸ ಮತ್ತು ವಿಚಾರಗೋಷ್ಠಿ ಆಯೋಜಿಸಲಾಗುವುದು. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರಿಗೆ ವೈದ್ಯಕೀಯ ಶಿಕ್ಷಣದ ವೇದಿಕೆ ಒದಗಿಸಲಾಗುವುದು. ವೈದ್ಯರ ಮೇಲಿನ ಹಿಂಸೆ, ನಕಲಿ ವೈದ್ಯರ ಸಮಸ್ಯೆ, ಕಠಿಣ ನಿಯಮಗಳು ಮತ್ತು ವೈಜ್ಞಾನಿಕ ಆಧಾರವಿಲ್ಲದ ಮಿಶ್ರ ವೈದ್ಯಕೀಯ ಪದ್ಧತಿ (ಮಿಕ್ಸೋಪಥಿ)ನ್ಯಾಷನಲ್ ಕಮಿಷನ್ ತಿದ್ದುಪಡಿ, ಸುರಕ್ಷತಾ ಕ್ರಮಗಳ ಸರಳೀಕರಣ, ವೈದ್ಯರ ರಕ್ಷಣಾ ಕಾಯ್ದೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ವಿ.ವಿ. ಚಿನಿವಾಲರ್ ಮಾತನಾಡಿ, ೈರ್ ಸೇಫ್ಟಿ ವಿಚಾರದಲ್ಲಿ ಸರ್ಕಾರದ ನಿಯಮಗಳ ಸರಳೀಕರಣಕ್ಕೆ ಈಗಾಗಲೇ ವೈದ್ಯಕೀಯ ಮತ್ತು ಗೃಹ ಸಚಿವರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ. ರಾಜ್ಯಮಟ್ಟದಲ್ಲಿ ಪಡೆಯುತ್ತಿದ್ದ ಪರವಾನಗಿ ಈಗ ಜಿಲ್ಲಾಮಟ್ಟದಲ್ಲಿ ದೊರೆಯುತ್ತಿದೆ. ಪರವಾನಗಿ ಶುಲ್ಕ ವಿಚಾರದಲ್ಲೂ ಗೊಂದಲವಿದ್ದು, ಶೀಘ್ರವೇ ಇತ್ಯರ್ಥಗೊಳ್ಳುವ ಭರವಸೆಯಿದೆ ಎಂದರು.
ಪದಾಧಿಕಾರಿಗಳಾದ ಡಾ.ಕೆ.ಅಮರೇಶ ಪಾಟೀಲ್, ಡಾ.ಮಲ್ಲನಗೌಡ ಪಾಟೀಲ್, ಡಾ.ಡಿ.ಹರೀಶ್, ಡಾ.ಶಂಕರನಾರಾಯಣ, ಡಾ. ಎಚ್.ಲಕ್ಕುಂಡಿ ಇತರರಿದ್ದರು.
ಪ್ಲಾಸ್ಟಿಕ್ ಸರ್ಜನ್ ಬಗ್ಗೆ ವಿಷಯ ಮಂಡನೆ: ವೈದ್ಯರ ರಾಜ್ಯಮಟ್ಟದ ಸಮ್ಮೇಳನದ ಅಂಜನಾದ್ರಿ ಹಾಲ್‌ನಲ್ಲಿ ಆಯೋಜಿಸಿದ್ದ ವಿಚಾರಣ ಸಂಕಿರಣದಲ್ಲಿ ಸ್ಕಿನ್ ಬ್ಯಾಂಕ್ ಮತ್ತು ರಿಸೆಂಟ್ ಆಡವಾನ್ಸ್‌ಸ್ ಇನ್ ಬರ್ನ್ಸ ವಿಚಾರ ಕುರಿತು ಪ್ಲಾಸ್ಟಿಕ್ ಸರ್ಜನ್, ಬೆಂಗಳೂರಿನ ಡಾ. ಮಂಜುನಾಥ ಪೆದ್ದಿ ವಿಷಯ ಮಂಡಿಸಿದರು. ವೈದ್ಯರಾದ ಡಾ.ಶರಣಸಪ್ಪ ಕಂಬಳಿ, ಡಾ.ಕೆ.ರವಿಕುಮಾರ, ಡಾ.ಆನಂದ ದಿವಟರ್ ಇತರರಿದ್ದರು.
ವೈದ್ಯರ ನಡಿಗೆ ಶಾಲೆ, ಸೈನಿಕ ಮತ್ತು ಹಳ್ಳಿ ಕಡೆ ಪರಿಕಲ್ಪನೆಯಡಿ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಡಾ.ಟಿ.ಎ.ವೀರಭದ್ರಯ್ಯ
ಐಎಂಎ, ನೂತನ ರಾಜ್ಯಾಧ್ಯಕ್ಷ