

ಗಂಗಾವತಿ: ವಿದ್ಯಾರ್ಥಿದೆಸೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕಿದ್ದು, ಸಮಾಜ ಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಜವಾಬ್ದಾರಿ ಅರಿತು ಅತ್ಯುತ್ತಮ ನಾಯಕರೆನಿಸಿಕೊಳ್ಳಬೆಕಿದ್ದು, ಪರಿಸರ ಕಾಳಜಿ ಜತೆಗೆ ಪರಿಸರ ಸ್ವಚ್ಛತೆಯತ್ತ ಗಮನಹರಿಸಿದಾಗ ನಿರೀಕ್ಷಿತ ಅಭಿವೃದ್ಧಿ ಸಾಧ್ಯ ಎಂದರು.
ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಟ ಪಾಟೀಲ್ ಮಾತನಾಡಿ, ಜೀವನದಲ್ಲಿ ಶಿಸ್ತು ಬಹು ಮುಖ್ಯವಾಗಿದ್ದು, ನಿರೀಕ್ಷಿತ ಗುರಿ ತಲುಪಲು ಶಿಸ್ತು ಸಹಕರಿಸಲಿದೆ. ಸರ್ವಾಂಗೀಣ ಪ್ರಗತಿ ಶಿಸ್ತಿನಿಂದ ಮಾತ್ರ ಸಾಧ್ಯ. ಶಾಲಾಹಂತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಉತ್ತಮ ನಾಯಕರೆನಿಸಿಕೊಳ್ಳಿ ಎಂದರು.
ಸಂಸತ್ತಿಗೆ ಚುನಾಯಿತರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ನಾಯಕತ್ವದ ಬ್ಯಾಡ್ಜ್‌ಗಳನ್ನು ವಿತರಿಸಲಾಯಿತು. ಶೈಕ್ಷಣಿಕ ನಿರ್ದೇಶಕಿ ಎಸ್. ಕಷ್ಣವೇಣಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತ ನಿರ್ದೇಶಕ ಎಚ್.ಕೆ ಚಂದ್ರಮೋಹನ್, ಪಿಆರ್‌ಎಂಗಳಾದ ನಿಂಗಪ್ಪ, ಮಂಜುನಾಥ, ಕಾಳೇಶ ಸೇರಿ ಶಿಕ್ಷಕ ಮತ್ತು ಶಿಕ್ಷಕರೇತ ಸಿಬ್ಬಂದಿ ಇದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಭೂಮಿಕಾ ಮತ್ತು ತುಳಸಿ ಕಾರ್ಯಕ್ರಮ ನಿರ್ವಹಿಸಿದರು.