ಸವಳ್ಯಾರ ಕ್ಯಾಂಪ್‌ಗೆ ಲೋಕಾ ತಂಡ ಭೇಟಿ, ಸ್ಥಳೀಯರಿಂದ ಅವ್ಯವಸ್ಥೆ ಮಾಹಿತಿ ಸಂಗ್ರಹ

Lokayukta team visit
ಗಂಗಾವತಿ ತಾಲೂಕಿನ ಆಗೋಲಿ ಗ್ರಾಪಂ ವ್ಯಾಪ್ತಿಯ ಸವಳ್ಯಾರ ಕ್ಯಾಂಪ್‌ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿತು. ಲೋಕಾಯುಕ್ತ ಸಿಪಿಐ ಶೈಲಜಾ, ಗ್ರಾಪಂ ಪಿಡಿಒ ಕಾಶೀನಾಥ, ಗ್ರಾಮಾಡಳಿತಾಧಿಕಾರಿ ಶಹನಾಜ್ ಬೇಗಂ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆಗೋಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸವಳ್ಯಾರ ಕ್ಯಾಂಪ್‌ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಹಂಪಸದುರ್ಗ ಅವಲಂಬಿತವಾಗಿರುವ ಸವಳ್ಯಾರ ಕ್ಯಾಂಪ್‌ನಲ್ಲಿ 17 ಮನೆಗಳಿದ್ದು, 60 ಜನಸಂಖ್ಯೆಯಿದೆ. ರಸ್ತೆ, ಕುಡಿವ ನೀರು ಸೇರಿ ಮೂಲ ಸೌಕರ್ಯಗಳಿಲ್ಲದ ಕ್ಯಾಂಪ್ ಆಗಿದ್ದು, 40ವರ್ಷಗಳಿಂದಲೂ ವಾಸವಾಗಿದ್ದಾರೆ. ರಸ್ತೆ ಸೇರಿ ಮೂಲ ಸೌಕರ್ಯಕ್ಕಾಗಿ 2023ರಲ್ಲಿ ಅಲ್ಲಿನ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಪ್ರಕರಣ ಗಂಭೀರತೆ ಪರಿಗಣಿಸಿರುವ ಲೋಕಾಯುಕ್ತ ಇಲಾಖೆ ಸ್ವಯಂ ದೂರು ದಾಖಲಿಸಿಕೊಂಡಿತ್ತು.

ವಿಚಾರಣೆಗಾಗಿ ಲೋಕಾಯುಕ್ತ ಸಿಪಿಐ ಶೈಲಜಾ ನೇತೃತ್ವದ ಕಂದಾಯ, ಅರಣ್ಯ ಮತ್ತು ಗ್ರಾಪಂ ಅಧಿಕಾರಿಗಳ ತಂಡ ಕ್ಯಾಂಪ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು. ಸ್ಥಳೀಯರಿಂದ ಸಮಸ್ಯೆಗಳನ್ನು ಅರಿತ ತಂಡ, ಮೂಲ ಸೌಕರ್ಯಗಳ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಂಡಿತು.

ಗ್ರಾಪಂ ಪಿಡಿಒ ಕಾಶೀನಾಥ ಮಾತನಾಡಿ, ರಸ್ತೆ ನಿರ್ಮಾಣ ಮತ್ತು ಇತರ ಸೌಲಭ್ಯಕ್ಕಾಗಿ ಅರಣ್ಯ ಇಲಾಖೆಗೆ ನಿರಪೇಕ್ಷಣಾ ಪತ್ರ ಬೇಕಿದ್ದು, ಜಿಪಂ ಸೇರಿ ಸಂಬಂಧಪಟ್ಟ ಇಲಾಖೆಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಲೋಕಾಯುಕ್ತ ಇಲಾಖೆ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರಿಂದ ಕ್ಯಾಂಪ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ ಎಂದರು. ಗ್ರಾಮಾಡಳಿತಾಧಿಕಾರಿ ಶಹನಾಜ್ ಬೇಗಂ, ಅರಣ್ಯ ಸಂರಕ್ಷಕರಾದ ಮಂಜುನಾಥ, ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net