

ಗಂಗಾವತಿ: ತಾಲೂಕಿನ ಸಂಗಾಪುರದ ಜೈನ್ ಪಬ್ಲಿಕ್ ಶಾಲೆಯನ್ನು ಏಕಾಏಕಿ ಬಂದ್ ಮಾಡಲು ಹೊರಟಿರುವ ಆಡಳಿತ ಮಂಡಳಿ ಕ್ರಮ ಖಂಡಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ನಗರದ ಬಿಇಒ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಸಂಗಾಪುರದಲ್ಲಿ 10 ವರ್ಷಗಳಿಂದ ಜೈನ್ ಪಬ್ಲಿಕ್ ಸ್ಕೂಲ್ ನಡೆಯುತ್ತಿದೆ. ಸಸ್ಯ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯನ್ನು ಏಕಾಏಕಿ ಬಂದ್ ಮಾಡುತ್ತಿದ್ದು, ಪಾಲಕರಿಂದ ಅಭಿಪ್ರಾಯ ಪಡೆದಿಲ್ಲ. ಮಕ್ಕಳ ವರ್ಗಾವಣೆ ಪತ್ರ ಪಡೆದುಕೊಂಡು ಹೋಗಿ ಹೇಳುತ್ತಿರುವುದು ಸರಿಯಲ್ಲ. ಕಾರಣವಿಲ್ಲದೇ ಬಂದ್ ಮಾಡುವುದರಿಂದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಬೇಕಾದ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗಲಿದೆ. ಬೇರೆ ಶಾಲೆಗೆ ಹೋದರೂ ಪಠ್ಯಕ್ರಮದ ಅಭ್ಯಾಸದ ಮೇಲೂ ಪರಿಣಾಮ ಬೀರಲಿದೆ. 1983ರ ಶಿಕ್ಷಣ ಕಾಯ್ದೆ ಪ್ರಕಾರ ಯಾವುದೇ ಶಾಲೆ ಬಂದ್ ಮಾಡಲು ವರ್ಷದ ಮುನ್ನವೇ ಪಾಲಕರಿಗೆ ತಿಳಿಸಬೇಕು. ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಪಾಲಕರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಬಿಇಒ ಕಚೇರಿ ಸಹಾಯಕಿ ರೇಣುಕಾಗೆ ಮನವಿಸಲ್ಲಿಸಿದರು.
ಪಾಲಕ ಪ್ರತಿನಿಧಿಗಳಾದ ಶರಣಪ್ಪ, ರಾಜಶೇಖರ, ಗವಿಸಿದ್ದಪ್ಪ, ಮಲ್ಲಯ್ಯ, ಕಿರಣ್, ಆನಂದ್, ಸುಧಾಕರ, ಸುರೇಶ, ಚಾಂದಪಾಷಾ, ಕಿಶೋರ ಸೇರಿ ಸಮಿತಿ ಸದಸ್ಯರಿದ್ದರು.