

ಗಂಗಾವತಿ: ನಗರದ ಸಾಯಿ ನಗರದ ಶ್ರೀ ಶಿರಿಡಿ ಸಾಯಿಬಾಬಾ ದೇವಾಲಯದ ರಜತ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಜರುಗಿದವು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಮೂರ್ತಿಗೆ ಕಾಕಡ ಆರತಿ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಭಕ್ತರಿಂದ ತಯಾರಿಸಿದ ಬೆಳ್ಳಿ ಸಿಂಹಾಸನ ಮತ್ತು ಪ್ರಭಾವಳಿಯನ್ನು ಸಮರ್ಪಿಸಲಾಯಿತು.
ಶ್ರೀ ಶಿರಿಡಿ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಸಮಿತಿ ಮತ್ತು ಶ್ರೀಶಿರಿಡಿ ಸಾಯಿಬಾಬಾ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಟ್ರಸ್ಟ್ ಸಂಚಾಲಕ ಟಿ.ರಾಮಕೃಷ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಗೋಪಿ ರಕ್ತ ಭಂಡಾರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ದೇವಾಲಯ ಸಮಿತಿ ಪದಾಧಿಕಾರಿ ಎಸ್.ಸುರೇಶ, ಯು.ಪಂಪಾಪತಿ, ಚನ್ನಪ್ಪ, ರಾಚೋಟೆಯ್ಯ ಜಗವತಿ, ಗುರುರಾಜ್, ಪ್ರಹ್ಲಾದ್, ರಾಮಚಂದ್ರಶ್ರೇಷ್ಟಿ, ಎಂ.ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್ಪ, ಡಾ.ಎ.ಎಸ್.ಎನ್.ರಾಜು, ಕಿರಣಕುಮಾರ ಇತರರಿದ್ದರು.