

ಗಂಗಾವತಿ: ಅಲ್ಪಸಂಖ್ಯಾತ ಮಕ್ಕಳ ಕಲ್ಯಾಣ ಮತ್ತು ಅಗತ್ಯತೆಗಳನ್ನು ಪೂರೈಸಲು ಸದ್ಭಾವನಾ ಮಂಟಪ ನಿರ್ಮಿಸಲಾಗಿದ್ದು, ಕೇಂದ್ರ ಪುರಸ್ಕೃತ ಯೋಜನೆಯಡಿ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ 1.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸದ್ಭಾವನ ಮಂಟಪ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಜಿಪಂ ಮತ್ತು ಅಲ್ಪಸಂಖ್ಯಾತ ಇಲಾಖೆ 12ನೇ ಪಂಚವಾರ್ಷಿಕ ಯೋಜನೆಯಡಿ ನಿರ್ಮಿಸಿದ್ದು, ಪ್ರಧಾನ ಮಂತ್ರಿ ಜನವಿಕಾಸ ಯೋಜನೆಯಡಿ ಸಾಕಾರಗೊಂಡಿದೆ. ಸಾಮಾಜಿಕ ಕೂಟ, ಸಭೆಗಳನ್ನು ಆಯೋಜಿಸುವಷ್ಟು ವ್ಯವಸ್ಥೆಯಿದ್ದು, ವಿಶಾಲ ಕೊಠಡಿಗಳನ್ನು ಹೊಂದಿದೆ. ಗ್ರಂಥಾಲಯ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕ್ಷೇತ್ರದಲ್ಲಿ ಶೈಕ್ಷಣಿಕ ಪೂರಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಮಾಜಿ ಶಾಸಕ ಸೋಮಶೇಖರರೆಡ್ಡಿ, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ನಿರ್ಮಿತಿ ಕೇಂದ್ರದ ಎಇಇ ಗಂಗಾಧರ ಶ್ರೇಷ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಮೀರ್‌ಅಲಿ, ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಮುಖಂಡರಾದ ಮನೋಹರಗೌಡ ಹೇರೂರು, ಯಮನೂರ ಚೌಡ್ಕಿ, ವೀರೇಶ ಬಲ್ಕುಂದಿ, ರಮೇಶ ಹೊಸ್ಮಲಿ, ವೀರೇಶ ಸುಳೇಕಲ್ ಇತರರಿದ್ದರು.
ಅಚ್ಚರಿ ಮೂಡಿಸಿದ ಸೋಮಶೇಖರ್ ರೆಡ್ಡಿ ಭಾಗಿ: ಕಾರ್ಯಕ್ರಮದಲ್ಲಿ ಬಳ್ಳಾರಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಭಾಗಿಯಾಗಿದ್ದು ಅಚ್ಚರಿ ಮೂಡಿಸಿದ್ದು, ನಗರದ ಸಿಬಿಎಸ್ ಬ್ಯಾಂಕ್ ಸೇರಿ ಹಲವು ಮುಖಂಡರು ಮನೆಗಳಿಗೂ ಭೇಟಿ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧಿಗಳಾಗಿದ್ದ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಒಂದೇ ವೇದಿಕೆ ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಗಣಿ ಪ್ರಕರಣದಿಂದ ಕಳೆದ ತಿಂಗಳು ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ರೆಡ್ಡಿಗೆ, ಸ್ಥಳೀಯ ಮುಖಂಡರ ವರ್ತನೆ ಗೊತ್ತಾಗಿದ್ದು, ಅನುಕಂಪಕಿಂತ ಸಂಭ್ರಮಿಸಿದ್ದೇ ಹೆಚ್ಚು. ಇದೇಕಾರಣಕ್ಕಾಗಿ ಕ್ಷೇತ್ರದಲ್ಲಿ ಸೋಮಶೇಖರ್ ರೆಡ್ಡಿ ಅವರನ್ನು ಉಸ್ತುವಾರಿಯನ್ನಾಗಿ ಬಿಡಲುಬಹುದೆಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನತ್ತಾರೆ ಬೆಂಬಲಿಗರು.