

ಗಂಗಾವತಿ: ತಾಲೂಕಿನ ಸಣಾಪುರದ ಗ್ರಾಪಂ ಕಚೇರಿ ಕಟ್ಟಡಕ್ಕಾಗಿ ತಾಲೂಕಾಡಳಿತ ಜಾಗ ಗುರುತಿಸಿದ್ದು, ಕಂದಾಯ ಸಿಬ್ಬಂದಿ ಸರ್ವೇ ಮೂಲಕ ಶನಿವಾರ ಸ್ಥಳ ಮೀಸಲಿರಿಸಿತು.
2015ರಲ್ಲಿ ಹೊಸ ಗ್ರಾಪಂ ಅಸ್ತಿತ್ವಕ್ಕೆ ಬಂದಿದ್ದು, ಸ.ಕಿ.ಪ್ರಾ. ಶಾಲೆ ಹಳೇಯ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಲಾಗಿತ್ತು. ಸ್ವಂತ ಕಟ್ಟಡ ನಿರ್ಮಾಣದ ಜಾಗಕ್ಕಾಗಿ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ, ಕಂದಾಯ ಇಲಾಖೆ ಸರ್ಕಾರಿ ಜಾಗೆ ನೀಡಿರಲಿಲ್ಲ. ಆಡಳಿತ ಮಂಡಳಿ ದೀರ್ಘ ಕಾಲದ ಹೋರಾಟದ ನಂತರ ಕೊನೆಗೂ ಜಾಗ ನೀಡಲು ತಾಲೂಕಾಡಳಿತ ಒಪ್ಪಿಕೊಂಡಿದೆ. ಸ.ನಂ.6ರಲ್ಲಿನ 1.20 ಎಕರೆ ಭೂಮಿಯನ್ನು ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ಕಂದಾಯ ಸಿಬ್ಬಂದಿ ಸರ್ವೇ ಮೂಲಕ ಗ್ರಾಪಂಗೆ ವರ್ಗಾಯಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಅಶೋಕ ಮಾತನಾಡಿ, ಪಂಚಾಯಿತಿ ಕಟ್ಟಡಕ್ಕಾಗಿ ಜಾಗ ನೀಡಿರುವುದು ಸ್ವಾಗತಾರ್ಹವಾಗಿದ್ದು, ಗ್ರಂಥಾಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೂ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದರು.
ಗ್ರಾಪಂ ಸದಸ್ಯ ಶೇರ್‌ಖಾನ್, ಕಂದಾಯ ನಿರೀಕ್ಷಕ ಬಷೀರುದ್ದೀನ್, ಗ್ರಾಮಾಡಳಿತಾಧಿಕಾರಿ ಚನ್ನಬಸಪ್ಪ, ಭೂಮಾಪಕ ಮಹ್ಮದ್ ರಫಿ ಇತರರಿದ್ದರು.