

ಗಂಗಾವತಿ: ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ. ಏನೇ ಸಂಕಷ್ಟ ಎದುರಾದರೂ ಹೋರಾಟ ನಿಲ್ಲದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಶಿಕ್ಷಣ ಮತ್ತು ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ಜಯಂತ್ಯುತ್ಸವ, ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೀಸಲು ಪಡೆಯಲು ಹೋರಾಟಗಳಲ್ಲಿ ಸಂಕಷ್ಟಗಳನ್ನು ಎದುರಿಸಿದರೂ ಸಮುದಾಯದ ಚಿಂತನೆ ಮುಂದೆ ಯಾವುದು ಕಾಣಲ್ಲ. ನಮ್ಮವರೇ ನಮಗೆ ತೊಂದರೆ ನೀಡಿದರೂ ಹೋರಾಟ ಮಾತ್ರ ನಿಲ್ಲಲ್ಲ. ಶಿಕ್ಷಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯ, ಸಾಧನೆಗೆ ಗುರಿಯೊಂದೇ ಸಾಕು ಎಂದರು.
ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಪಂಚಮಸಾಲಿ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದ್ದು, ಎಲ್ಲ ಸಮುದಾಯದ ಜತೆ ಉತ್ತಮ ಬಾಂಧವ್ಯ ಹೊಂದಿದೆ. ನಗರದಲ್ಲಿರುವ ಬಸವೇಶ್ವರ ಮೂರ್ತಿ ಬಳಿಯೇ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಸಹಕರಿಸಲಾಗುತ್ತಿದ್ದು, ಮೀಸಲು ವಿಚಾರದಲ್ಲಿ ಬೆಂಬಲವಿದೆ ಎಂದರು.
ವಿವಿಧ ಕ್ಷೇತ್ರದ ಸಾಧಕರು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ಎಸ್.ಶಿವರಾಮನಗೌಡ ಪ್ರಾಸ್ತಾವಿಕ ಮಾತನಾಡಿದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಸಂಸದ ಕೆ.ರಾಜಶೇಖರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸದಸ್ಯ ನವೀನ್ ಮಾ.ಪಾಟೀಲ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮುಖಂಡರಾದ ನೆಕ್ಕಂಟಿ ಸೂರಿಬಾಬು, ಬಸವರಾಜ ಕ್ಯಾವಟರ್, ಎಚ್.ಎಸ್.ಗಿರೇಗೌಡ, ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಕಳಕನಗೌಡ ಪಾಟೀಲ್ ಕಲ್ಲೂರು, ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ತಾಲೂಕಾಧ್ಯಕ್ಷ ಶಿವಪ್ಪ ಯಲಬುರ್ಗಿ, ನಿವೃತ್ತ ಉಪನ್ಯಾಸಕ ಸೋಮಶೇಖರ ಕಂಪ್ಲಿ ಇತರರಿದ್ದರು. ಇದಕ್ಕೂ ಮುನ್ನ ನಗರದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಿಸಲಾಯಿತು.
ಪಂಚಮಸಾಲಿ ಸಮುದಾಯದ ಮೀಸಲು ಹೋರಾಟಕ್ಕೆ ಹಿಂದುಳಿದ ವರ್ಗದ ನಾಯಕನಾಗಿ ನನ್ನ ಸಂಪೂರ್ಣ ಬೆಂಬಲವಿದೆ. ಕೂಡಲ ಸಂಗಮ ಸ್ವಾಮೀಜಿಗೆ ಕೆಲವರು ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿಯಿದ್ದು, ಶ್ರೀಗಳು ಇಚ್ಛಿಸಿದರೆ ಆನೆಗೊಂದಿ ಭಾಗದಲ್ಲಿ ಪೀಠ ನಿರ್ಮಿಸಲು ಸಹಕರಿಸಲಾಗುವುದು.
ಎಚ್.ಆರ್.ಶ್ರೀನಾಥ
ಮಾಜಿ ಎಂಎಲ್ಸಿ, ಗಂಗಾವತಿ