ಪರಿಹಾರ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿ, ಅಧಿಕಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ

PADDY VISIT
ಹವಾಮಾನ ವೈಪರಿತ್ಯದಿಂದ ಹಾಳಾಗಿರುವ ಗಂಗಾವತಿ ತಾಲೂಕಿನ ಹಿರೇಜಂತಕಲ್ ಭತ್ತದ ಗದ್ದೆಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭಾನುವಾರ ಭೇಟಿ ನೀಡಿ ಬೆಳೆ ನಷ್ಟದ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಯು.ನಾಗರಾಜ್, ನಗರಸಭೆ ಸದಸ್ಯ ಪರಶುರಾಂ ಮಡ್ಡೇರ್, ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ ಇತರರಿದ್ದರು.
Published on

ಗಂಗಾವತಿ: ಹವಾಮಾನ ವೈಪರಿತ್ಯದಿಂದ ಹಾಳಾಗಿರುವ ತಾಲೂಕಿನ ಹಿರೇಜಂತಕಲ್ ಮತ್ತು ಮಲ್ಲಾಪುರದ ಭತ್ತದ ಗದ್ದೆಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭಾನುವಾರ ಭೇಟಿ ನೀಡಿ ಬೆಳೆ ನಷ್ಟದ ಮಾಹಿತಿ ಪಡೆದುಕೊಂಡರು.

ವಾರದಿಂದ ಸುರಿಯುತ್ತಿರುವ ಮಳೆ, ಬೀಸುತ್ತಿರುವ ಗಾಳಿಯಿಂದ ತಾಲೂಕಿನ ಬಹುತೇಕ ಭಾಗದಲ್ಲಿ ಹಿಂಗಾರು ಭತ್ತದ ಬೆಳೆ ನೆಲಕ್ಕೊರಗಿದ್ದು, ಕೆಲವೆಡೆ ಮೊಳಕೆಯೊಡಿಯುತ್ತಿವೆ. ರೈತರ ಮನವಿ ಹಿನ್ನೆಲೆಯಲ್ಲಿ ತಾಲೂಕಾಡಳಿತ ಆಧಿಕಾರಿಗಳೊಂದಿಗೆ ಭತ್ತದ ಗದ್ದೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಹಾನಿಗೊಳಗಾದ ಭತ್ತದ ಬೆಳೆಯ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಭತ್ತದ ಬೆಳೆ ಹಾಳಾಗಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ತಾಲೂಕಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾನಿ ವರದಿ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಎಂದರು.

ತಹಸೀಲ್ದಾರ್ ಯು.ನಾಗರಾಜ್, ನಗರಸಭೆ ಸದಸ್ಯ ಪರಶುರಾಂ ಮಡ್ಡೇರ್, ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರ ಹೀರೂರ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಮುಖಂಡರಾದ ಮನೋಹರಗೌಡ ಹೇರೂರು, ವೀರೇಶ ಬಲ್ಕುಂದಿ, ವಲೀಸಾಬ್, ವಿಶ್ವನಾಥ ಗಂಜಿಪೇಟಿ ಇತರರಿದ್ದರು.

ನಷ್ಟ ಭರಿಸಲು ಜೆಡಿಎಸ್ ಒತ್ತಾಯ: ಬೆಳೆಹಾನಿಗೊಳಗಾದ ತಾಲೂಕಿನ ಸಿದ್ದಿಕೇರಿ ಮತ್ತು ಹೊಸ್ಮಲಿಕ್ಯಾಂಪ್ ಪ್ರದೇಶದ ಭತ್ತದ ಗದ್ದೆಗೆ ಜೆಡಿಎಸ್ ರಾಜ್ಯ ಘಟಕದ ಪದಾಧಿಕಾರಿಗಳು ಸೋಮವಾರ ಭೇಟಿ ನೀಡಿ ನಷ್ಟ ಪ್ರಮಾಣದ ಮಾಹಿತಿ ಪಡೆದುಕೊಂಡರು. ಮಳೆ ಮತ್ತು ಗಾಳಿಯಿಂದ ಭತ್ತದ ಬೆಳೆ ನೆಲಕ್ಕೊರಗಿದ್ದು, ಇಳುವರಿ ಸಿಗಲ್ಲ. ವಾಸ್ತವ ಪರಿಸ್ಥಿತಿ ಅವಲೋಕನಕ್ಕಾಗಿ ತಂಡ ಭೇಟಿ ನೀಡಿ ರೈತರಿಂದ ಅಭಿಪ್ರಾಯ ಸಂಗ್ರಹಿಸಿತು.

ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಮಾತನಾಡಿ, ನಿರಂತರ ಮಳೆಯಿಂದ ಭತ್ತದ ಬೆಳೆ ಹಾಳಾಗಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಎಕರೆಗೆ 40ಸಾವಿರ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದ್ದು, ಚಳಿಗಾಲ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಚರ್ಚಿಸುವಂತೆ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಸುರೇಶಬಾಬುರಿಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಜಿಲ್ಲೆಗೆ ಕೃಷಿ ಸಚಿವರು ಭೇಟಿ ನೀಡುವಂತೆ ಒತ್ತಾಯಿಸಲಾಗಿದೆ ಎಂದರು. ಜೆಡಿಎಸ್ ತಾಲೂಕಾಧ್ಯಕ್ಷ ಕೃಷ್ಣನಾಯಕ, ಎಸ್‌ಟಿ ಘಟಕದ ತಾಲೂಕಾಧ್ಯಕ್ಷ ಹನುಮಂತಪ್ಪ ಬೇವೂರ್, ಮುಖಂಡರಾದ ವೀರಣ್ಣ, ನಾಗರಾಜ್, ದ್ಯಾಮಣ್ಣ, ಬಸಪ್ಪನಾಯಕ, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net