

ಗಂಗಾವತಿ: ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್ ನಗರದ ಟಿಎಪಿಸಿಎಂಎಸ್ ಆವರಣದ ಪಡಿತರ ಅಕ್ಕಿ ದಾಸ್ತಾನು ಗೋದಾಮಿಗೆ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಪ್ರಕರಣ ನಡೆದು 72 ಗಂಟೆ ನಂತರ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಒಂದೇ ಗೋದಾಮಿನಲ್ಲಿನ ದಾಸ್ತಾನು ಲೆಕ್ಕಪತ್ರಗಳ ಮಾಹಿತಿ ಪಡೆದು ಹಿಂದುರಿಗಿದ್ದಾರೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಾದರೂ, ಸಮರ್ಪಕ ಮಾಹಿತಿ ನೀಡದೇ ವಾಪಸ್ಸಾಗಿದ್ದಾರೆ. ಆಹಾರ ಶಿರಸ್ತೇದಾರರಾದ ಸುಹಾಸ್, ಶೇಖರಪ್ಪ, ನಾಗತ್ನಮ್ಮ ಇದ್ದರು.
ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿದ್ದ ಅನ್ನಭಾಗ್ಯ ಅಕ್ಕಿಯನ್ನು ಖಾಸಗಿ ಬ್ರಾಂಡ್ ಚೀಲಗಳ ಮೂಲಕ ಹೊರಗೆ ಸಾಗಿಸಲಾಗುತ್ತಿದ್ದು, ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಆ.26ರಂದು ದಾಳಿ ನಡೆಸಿದ್ದರು. ಖಾಸಗಿ ಬ್ರಾಂಡ್‌ಗಳ 50 ಕೆಜಿ ಸಾಮರ್ಥ್ಯದ ಚೀಲದಲ್ಲಿ ಪಡಿತರ ಅಕ್ಕಿ ಶೇಖರಿಸಿಟ್ಟಿದ್ದು ಬೆಳಕಿಗೆ ಬಂದಿದ್ದು, ಇನ್ನೂ ಕೆಲವನ್ನು ಲಾರಿಯಲ್ಲಿ ಲೋಡ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣ ನಿಗಮದ ವ್ಯವಸ್ಥಾಪಕ ಸೇರಿ ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಶಿಸ್ತು ಪ್ರಾಧಿಕಾರ ಸೋಮಶೇಖರ್‌ರನ್ನು ಅಮಾನತುಗೊಳಿಸಿತ್ತು. ಈ ಸಂಬಂಧ ಆ.27ರಂದು ವಿಜಯವಾಣಿಯಲ್ಲಿ ಸಮಗ್ರ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಕರಣ ಮುಚ್ಚಿ ಹಾಕುವ ಯತ್ನ: ಉದ್ದೇಶಿತ ಗೋದಾಮಿನಿಂದಲೇ ಆ.2ನೇ ವಾರದಲ್ಲಿ ಖಾಸಗಿ ಬ್ರಾಂಡ್ ಚೀಲದಲ್ಲಿ ಅಕ್ಕಿ ರವಾನೆಯಾಗಿರುವುದು ಗೊತ್ತಾಗಿದ್ದು, ಸಿಸಿ ಕ್ಯಾಮರಾದಲ್ಲೂ ದಾಖಲೆಯಾಗಿದೆನ್ನಲಾಗಿದೆ. ಅದರಂತೆ ಜಪ್ತಿ ಮಾಡಿರುವ ಅಕ್ಕಿಯನ್ನು ಟೆಂಡರ್ ಪಡೆದವರಿಗೆ ನೀಡುವ ನೆಪದಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಹೊರಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಟೆಂಡರ್ ಪಡೆದ ರೈಸ್‌ಮಿಲ್ ಮಾಲೀಕರ ಹೆಸರು ಗೊತ್ತಿದ್ದರೂ, ಹೆಸರು ನಮೂದಿಸದೇ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಪಂಚರ ಹೆಸರನ್ನು ತೋರಿಸದೇ ಪ್ರಕರಣ ದಾಖಲಿಸಿಕೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಲಾಲ್ ಬ್ರಾಂಡ್ ಹೆಸರಿನಲ್ಲಿ ಅಕ್ಕಿಯನ್ನು ದುಬೈಗೆ ರವಾನೆಯಾಗುತ್ತಿರುವುದು ಗೊತ್ತಾಗಿದ್ದು, ಮಾಲೀಕರನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ವಿಲವಾಗಿದ್ದಾರೆ. ಕಿಲ್ಲಾ ಏರಿಯಾದಲ್ಲಿ ಸಂಗ್ರಹಿಸಿಟ್ಟಿದ್ದ 26 ಕ್ವಿಂಟಾಲ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಜಾಗದ ಮಾಲೀಕರಾದ ಹುಸೇನ ಪೀರಾ ಮತ್ತು ಮುರ್ತುಜಾಸಾಬ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಮಗ್ರ ತನಿಖೆಗೆ ಸಂಘಟನೆಗಳ ಒತ್ತಾಯ: ಅನ್ನಭಾಗ್ಯ ಯೋಜನೆ ಅಕ್ಕಿ ಖಾಸಗಿ ರೈಸ್ ಮಿಲ್‌ಗೆ ಸಾಗಿಸಲೆತ್ನಿಸಿದ ಆಹಾರ ಇಲಾಖೆ ಮತ್ತು ಉಗ್ರಾಣ ನಿಗಮದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ನಗರದ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಟಿಎಪಿಸಿಎಂಎಸ್ ಗೋದಾಮಿನಲ್ಲಿ ಭೇಟಿಯಾದ ಪದಾಧಿಕಾರಿಗಳು, ಗೋದಾಮಿನಿಂದ ಅಕ್ರಮ ಸಾಗಣೆಯಾಗುತ್ತಿರುವ ಅಕ್ಕಿ ಮಾಹಿತಿ ಮತ್ತು ಖಾಸಗಿ ಬ್ರಾಂಡ್‌ಗಳ ಚೀಲಗಳು ಉಗ್ರಾಣದಲ್ಲಿರುವ ಬಗ್ಗೆ ದಾಖಲೆ ನೀಡಿದರು.
ಆರ್‌ಟಿಐ ಕಾರ್ಯಕರ್ತ ಎಸ್.ಎಚ್.ಮುಧೋಳ್ ಮಾತನಾಡಿ, ಸರ್ಕಾರ ಉಗ್ರಾಣ ನಿಗಮದಿಂದ 35 ಟನ್ ಪಡಿತರ ಅಕ್ಕಿ ಸಾಗಣೆಯಾಗುತ್ತಿರುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಸಂಘಟನೆ ಪದಾಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಪ್ರಕರಣ ದಾಖಲಿಸಿದ್ದು, ಪ್ರಭಾವಿಗಳನ್ನು ಉಳಿಸುವ ಯತ್ನ ನಡೆದಿದೆ. ತಪ್ಪಿಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಮಾಂತಾ ವೆಂಕಟೇಶ, ಶಿವಪ್ಪ ಮಾದಿಗ, ಸಲೀಂಭಾಗವಾನ್ ಇತರರಿದ್ದರು.
ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ದಾಸ್ತಾನು ಲೆಕ್ಕಪತ್ರ ಪರಿಶೀಲಿಸಲಾಗುತ್ತಿದೆ. ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗುವುದು.
ಸೋಮಶೇಖರ್ ಬಿರಾದಾರ್
ಉಪನಿರ್ದೇಶಕ, ಆಹಾರ ಇಲಾಖೆ