

ಗಂಗಾವತಿ: ಎಪಿಎಂಸಿ ಗಂಜ್ ಪ್ರಾಂಗಣದಲ್ಲಿನ ಹಮಾಲರ ಕಾಲನಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಶ್ರೀ ಚನ್ನಬಸವ ಸ್ವಾಮಿ ಗಂಜ್ ಹಮಾಲಿ ಕಾರ್ಮಿಕರ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ತಾಲೂಕು ಘಟಕದ ಸದಸ್ಯರು ನಗರದ ಎಪಿಎಂಸಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ತಾಲೂಕು ಸಮಿತಿ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಎಪಿಎಂಸಿ ಕಾರ್ಯದರ್ಶಿ ಯಮುನಪ್ಪಗೆ ಸಲ್ಲಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, 30 ವರ್ಷಗಳಿಂದಲೂ ಹಮಾಲರು ವಾಸಿಸುವ ಕಾಲನಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಕುಡಿವ ನೀರು, ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾನವಾಗಿಲ್ಲ. ಕಾಲನಿ ಸುತ್ತಲೂ ಮುಳ್ಳುಕಂಟೆಗಳು ಬೆಳೆದು ನಿಂತಿದ್ದು, ವಿಷಜಂತುಗಳ ಕಾಟ ಹೆಚ್ಚಾಗಿದೆ. ಬೀದಿ ದೀಪಗಳು ಬೆಳಗದಿದ್ದರಿಂದ ಕತ್ತಲು ಆವರಿಸಿದ್ದು, ಸ್ವಚ್ಛತೆಯಿಲ್ಲ.
ಮಹಿಳೆಯರಿಗೆ ಶೌಚಗೃಹವಿಲ್ಲದ್ದರಿಂದ ಬಯಲೇ ಗತಿಯಾಗಿದ್ದು, ರಕ್ಷಣೆಯಿಲ್ಲದಂತಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿದ್ದರಿಂದ ನಗರಸಭೆ ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಯೂನಿಯನ್ ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಕೃಷ್ಣನಾಯಕ, ಮಂಜುನಾಥ, ಸೋಮನಾಥ, ಶಿವಣ್ಣ ಬೆಣಕಲ್, ರಹೀಂಸಾಬ್, ಲಕ್ಷ್ಮಣ, ಚಂದುಸಾಬ್, ಮಹ್ಮದ್‌ಅಲಿ, ವಲಿಸಾಬ್, ಬಸಮ್ಮ, ಗಂಗಮ್ಮ, ರಾಜಮ್ಮ, ಬಾಬಣ್ಣ, ಜಯಣ್ಣ ಇತರರಿದ್ದರು.