ಕೇಂದ್ರ ಸರ್ಕಾರದ ಕ್ರಮಕ್ಕೆ ಖಂಡನೆ

22052020 Gangavathi ACCTU protest
Published on

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ

ಗಂಗಾವತಿ : ಸುಗ್ರೀವಾಜ್ಞೆ ಮೂಲಕ ಕಾರ್ಮಿಕ ಕಾಯ್ದೆಗಳನ್ನು ಅಮಾನತ್ತಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ನಗರದ ಆಟೋನಗರದ ಎಸಿಸಿಟಿಯು ಕಚೇರಿ ಮುಂದೆ ಪ್ಲೇಕಾರ್ಡ್ ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಸಮಿತಿ ಜಿಲ್ಲಾ ಸಂಚಾಲಕ ಜೆ.ಭಾರದ್ವಾಜ್ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳ ಸಂದರ್ಭ ಕಾರ್ಮಿಕರು, ರೈತರನ್ನು 144 ಸೆಕ್ಷನ್ ಅಡಿ ನಿರ್ಬಂಧಿಸಿ ಕಾಯ್ದೆ, ಕಾನೂನುಗಳನ್ನು ಸರ್ಕಾರ ಗಾಳಿಗೆ ತೂರಿದೆ. ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾಯ್ದೆ ಜಾರಿಗೊಳಿಸುತ್ತಿರುವುದು ಅಪಾಯಕಾರಿ. 3 ವರ್ಷ ಕಾರ್ಮಿಕ ಕಾಯ್ದೆಗಳನ್ನು ಅಮಾನತು ಮಾಡಿರುವುದು ದುರದೃಷ್ಟಕರ. ವಲಸೆ ಕಾರ್ಮಿಕರು ಬೀದಿಯಲ್ಲಿ ನಡೆಯುತ್ತ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಪರ ಕಾಯ್ದೆ ರೂಪಿಸಿ ಭೂಮಿ ಖರೀದಿಗೆ ಅವಕಾಶ ನೀಡಿದೆ. ಕಲ್ಲಿದ್ದಿಲು ಮತ್ತಿತರ ಗಣಿಗಳೊಂದಿಗೆ ಎಪಿಎಂಸಿ ಖಾಸಗೀಕರಣಗೊಳಿಸುತ್ತಿರುವುದು ಕಾರ್ಮಿಕರು, ರೈತ ವಿರೋಧಿ ನೀತಿಯಾಗಿದೆ. ಇವುಗಳನ್ನು ಕೈ ಬಿಡಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ವಿಜಯ, ಕಟ್ಟಾರಾಜ್, ದೇವಣ್ಣ, ಲಿಂಗಪ್ಪ ಸೇರಿ ಸಿಪಿಐ(ಎಂ), ಹಮಾಲಿ, ಪ್ರಾಂತ ಕೃಷಿ ಕೂಲಿಕಾರ ಸಂಘಟನೆಗಳ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net