

ಗಂಗಾವತಿ: ತಾಲೂಕಿನ ಬಸಾಪಟ್ಟಣಕ್ಕೆ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಮೀಸಲಾದ ಸರ್ಕಾರಿ ಜಾಗೆಯ ಹದ್ದು ಮಾಡಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಸಮಿತಿ ಸದಸ್ಯರು ಗ್ರಾಮಾಡಳಿತಾಧಿಕಾರಿ ಪ್ರವೀಣಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಸಮಿತಿ ಸದಸ್ಯರೊಂದಿಗೆ ಬಸಾಪಟ್ಟಣದ ಗ್ರಾಮಾಡಳಿತ ಕಚೇರಿಗೆ ತೆರಳಿದ ಪದಾಧಿಕಾರಿಗಳು, ಕಟ್ಟಡಕ್ಕೆ ಮೀಸಲಾದ ಜಾಗೆಯನ್ನು ಉಳಿಸುವಂತೆ ಮನವಿ ಮಾಡಿದರು.
ಪಕ್ಷದ ರೈತ ಘಟಕದ ರಾಜ್ಯ ಕಾರ್ಯದರ್ಶಿ ಕನಕಪ್ಪ ಹುಡೇಜಾಲಿ ಮಾತನಾಡಿ, ಗ್ರಾಮದ ಸ.ನಂ.54/3*ರಲ್ಲಿನ 1 ಎಕರೆ 36 ಗುಂಟೆ ಗಾಯಿರಾಣ ಜಾಗವನ್ನು ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಹಲವು ವರ್ಷಗಳಿಂದ ಮೀಸಲಿಡಲಾಗಿದ್ದು, ಹದ್ದು ಬಸ್ತು ವಿಳಂಬದಿಂದ ಕಟ್ಟಡ ನಿರ್ಮಾಣವಾಗುತ್ತಿಲ್ಲ.
ಉದ್ದೇಶಿತ ಭೂಮಿ ಒತ್ತುವರಿಯಾಗುವ ಸಾಧ್ಯತೆಗಳಿದ್ದು, ಕಾಯ್ದಿರಿಸಿದ ಜಾಗವನ್ನು ಸರ್ವೇ ಕೈಗೊಂಡು, ಹದ್ದುಬಸ್ತಿನೊಂದಿಗೆ ಇಲಾಖೆ ಸುಪರ್ದಿಗೆ ಪಡೆಯುವಂತೆ ಮನವಿ ಮಾಡಿದರು.