ಸಮಾಜ ಸಂಘಟನೆಗೆ ಹೊಂದಾಣಿಗೆ ಅಗತ್ಯ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿಕೆ

Pratibha Award-Achievement Award
ಗಂಗಾವತಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬೆಳಗಾವಿ ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸೋಮವಾರ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ತಾಲೂಕಾಧ್ಯಕ್ಷ ಸೋಮನಾಥ ಪಟ್ಟಣಶೆಟ್ಟಿ ಇತರರಿದ್ದರು.
Published on

ಗಂಗಾವತಿ: ಸಮಾಜ ಸಂಘಟನೆ ಜತೆಗೆ ಅನ್ಯ ಸಮಾಜದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಬೆಳಗಾವಿ ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಲಹೆ ನೀಡಿದರು.

ನಗರದ ಸಿಬಿಎಸ್ ಕಲ್ಯಾಣ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಕೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಸಮಾಜ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಿದ್ದು, ಕಾಲೆಳೆಯುವ ಮತ್ತು ಸಮುದಾಯದ ಬಗ್ಗೆ ಮಾತನಾಡುವ ನಮ್ಮವರಿಗೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಹೊಂದಾಣಿಕೆ ಮೂಲಕ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಪಾಲಕರು, ಶಿಕ್ಷಕರು ಮತ್ತು ಸಮಾಜದೊಂದಿಗೆ ಗೌರವದಿಂದ ಇರಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ಕೊಪ್ಪಳ ಜಿಲ್ಲೆಯಿಂದಲೇ 2004ರಲ್ಲಿ ಆರಂಭವಾದ ಸಮಾಜದ ಸಂಘಟನೆ, ಇಂದು ದೊಡ್ಡದಾಗಿ ಬೆಳೆದಿದೆ. ರಾಜ್ಯಕ್ಕೆ 7 ಮಂದಿ ಸಿಎಂ ನೀಡಿದ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಸಮಾಜಕ್ಕೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಯೋಜನೆ ಶುರುವಾಗಬೇಕಾದರೆ, ಕೊಪ್ಪಳ ಜಿಲ್ಲೆಯಿಂದಲೇ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಬಸವನಬಾಗೇವಾಡಿ ಉಪನ್ಯಾಸಕ ಅಶೋಕ ಹಂಚಲಿ ಮತ್ತು ಸಂಘದ ಮಹಿಳಾ ಘಟಕದ ಸದಸ್ಯೆ ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಉಪನ್ಯಾಸ ನೀಡಿದರು. ಐಎಂಎ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್ ಸೇರಿ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಗವಿಯಪ್ಪ ಜವಳಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿದರಿ, ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ತಾಲೂಕಾಧ್ಯಕ್ಷ ಸೋಮನಾಥ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆರ್ಲೂರ್ ಶಿವಕುಮಾರ, ವಿವಿಧ ಘಟಕಗಳ ಪದಾಧಿಕಾರಿಗಳಾದ ಮಹದೇವಪ್ಪ ಕೋಟಿ, ರೇಖಾ ಅಂಗಡಿ, ಸುಮಾ ಎಂ. ಮಸ್ಕಿ, ಶಾಂತಪ್ಪ ಸುಂಕ್ಲಾಪುರ, ಎಂ.ಮಹೇಶ ನಂದಿ, ವಿಶ್ವನಾಥ ಮಳಗಿ ಇತರರಿದ್ದರು.

ವಿದ್ಯಾರ್ಥಿಗಳು ಗುರು-ಹಿರಿಯರಿಗೆ ವಿಧೇಯರಾಗಿ ಇರಬೇಕಿದ್ದು, ಉತ್ತಮ ಸಂಸ್ಕಾರದ ಮೂಲಕ ಉನ್ನತ ಶಿಕ್ಷಣ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪಾಲಕರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು.

ಪರಣ್ಣಮುನವಳ್ಳಿ

ಮಾಜಿ ಶಾಸಕ, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net