

ಗಂಗಾವತಿ: ಕೂಲಿ ಕಾರ್ಮಿಕರ ಜೀವನ ಭದ್ರತೆಗೆ ಪೂರಕವಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ವಿಮೆ ಹಾಗೂ ಅಟಲ್ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಗ್ರಾಪಂ ಪಿಡಿಒ ಸುರೇಶ ಛಲವಾದಿ ತಿಳಿಸಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ತಿರುಮಲಾಪುರ ಕೆರೆಯಲ್ಲಿ ಶನಿವಾರ ನರೇಗಾ ಯೋಜನೆಯಡಿ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ವಾರ್ಷಿಕ 330 ರೂ.ಪಾವತಿಸಿದರೆ (50 ವರ್ಷದೊಳಗೆ) ಅಕಾಲಿಕ ಮರಣ ಸಂದರ್ಭದಲ್ಲಿ ನಾಮಿನಿದಾರರಿಗೆ 2 ಲಕ್ಷ ರೂ., ಪಿಎಂ ಸುರಕ್ಷಾ ಬಿಮಾ ಯೋಜನೆಗೆ ವಾರ್ಷಿಕ 12 ರೂ. ಪಾವಿತಿಸಿದರೆ ಅಪಘಾತ ವಿಮೆ ಸೌಲಭ್ಯ ಪಡೆಯಬಹುದಾಗಿದೆ. 18-70 ವರ್ಷದೊಳಗಿನವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 18-40 ವರ್ಷದೊಳಗಿನವರು ಅಟಲ್ ಪಿಂಚಣಿ ಯೋಜನೆ ನೋಂದಾಯಿಸಿಕೊಂಡು ಮಾಸಿಕ ಯೋಜನೆ ಮೊತ್ತ ಪಾವತಿಸಿದರೆ 60 ವರ್ಷ ಮೇಲ್ಪಟ್ಟ ನಂತರ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಎಲ್ಲ ಕೂಲಿಕಾರ್ಮಿಕರು ಕಡ್ಡಾಯವಾಗಿ ಆಯುಷ್ಮಾನ್ ಕಾರ್ಡ್ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಪಂ ಸಹಾಯಕ ಸಮನ್ವಯಾಧಿಕಾರಿ ಮಹಾಂತಸ್ವಾಮಿ, ಉದ್ಯೋಗ ಖಾತ್ರಿ ಯೋಜನೆಯಡಿ ಪುರುಷ ಮತ್ತು ಮಹಿಳಾ ಕೂಲಿಕಾರರಿಗೆ ಸಮಾನ ಕೂಲಿ ಇದ್ದು, ಕುಟುಂಬಕ್ಕೆ 100 ಮಾನವ ದಿನಗಳು ದುಡಿಯಲು ಅವಕಾಶವಿದೆ ಎಂದರು.
ಗ್ರಾಪಂ ಸದಸ್ಯೆ ಶಾಂತಮ್ಮ, ತಾಪಂ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಸಹಾಯಕ ವಿಜಯ ಶಿರಿಗೇರಿ, ಸಿಬ್ಬಂದಿ ಮಹ್ಮದ್, ರಾಜಾಭಕ್ಷಿ, ಅಮರ್, ಗ್ರಾಮ ಕಾಯಕ ಮಿತ್ರ ಸುಜಾತಾ ಹಾಗೂ ಕಾಯಕಬಂಧುಗಳಿದ್ದರು.