

ಗಂಗಾವತಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕು ಘಟಕ ನಗರದ ಮಿನಿ ವಿಧಾನಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಂಸದ ಎಸ್.ಶಿವರಾಮಗೌಡ ಮಾತನಾಡಿ, ಮೀಸಲಾತಿಗಾಗಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಾಗ ಸೆ.15ರೊಳಗೆ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಸಮುದಾಯ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಸೂಕ್ತ ಸ್ಥಾನಮಾನ ದೊರೆಯಲು ಮೀಸಲಿನ ಅಗತ್ಯವಿದೆ. ಪ್ರಸಕ್ತ ಅಧಿವೇಶನದಲ್ಲಿ ಮೀಸಲು ಬಗ್ಗೆ ಸರ್ಕಾರ ಸ್ಪಷ್ಟ ನಿಲವು ಪ್ರಕಟಿಸಬೇಕು. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಅ.1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಗ್ರಾಮೀಣ ಘಟಕದ ಅಧ್ಯಕ್ಷ ಚನ್ನವೀರನಗೌಡ ಕೋರಿ, ನಗರ ಘಟಕದ ಅಧ್ಯಕ್ಷ ಬಸವರಾಜ ರಾಮತ್ನಾಳ್, ಎಸ್.ಶರಣಬಸಪ್ಪ ಪದಾಧಿಕಾರಿಗಳಾದ ಜಂಬಣ್ಣ ತಾಳೂರು, ಮಹಾಲಿಂಗಪ್ಪ ಬನ್ನಿಕೊಪ್ಪ, ವೀರೇಶ ಸುಳೇಕಲ್, ಶರಣೇಗೌಡ ಮಾಲಿ ಪಾಟೀಲ್, ಸುರೇಶ ಗೌರಪ್ಪ, ಎಸ್.ಶಿವರಾಜಗೌಡ, ಎ.ಕೆ.ಮಹೇಶ ಕುಮಾರ್, ಮಂಜುನಾಥ ಹೊಸ್ಕೇರಾ, ಬಸವರಾಜ ಪಾಟೀಲ್ ಹಣವಾಳ ಇತರರಿದ್ದರು.