ಜಯಲಕ್ಷ್ಮೀ ದೇವಿ ಮೂರ್ತಿ, ಶ್ರೀಚಕ್ರಕ್ಕೆ ಹಾನಿಯಾಗಿಲ್ಲ: ಸಂಸದ ಕರಡಿ ಸಂಗಣ್ಣ ಹೇಳಿಕೆ

020622 Pampasarovara MP Visit
ಗಂಗಾವತಿ ತಾಲೂಕಿನ ಆನೆಗೊಂದಿ ಪಂಪಾಸರೋವರದ ಶ್ರೀ ಜಯಲಕ್ಷ್ಮಿ ದೇವಾಲಯಕ್ಕೆ ಸಂಸದ ಕರಡಿ ಸಂಗಣ್ಣ ನೇತೃತ್ವದ ಬಿಜೆಪಿ ಮುಖಂಡರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Published on

ಗಂಗಾವತಿ: ಐತಿಹಾಸಿಕ ಪ್ರಸಿದ್ಧ ತಾಲೂಕಿನ ಆನೆಗೊಂದಿ ಬಳಿ ಪಂಪಾಸರೋವರ ಜೀರ್ಣೋದ್ಧಾರ ಕಾಮಗಾರಿ ಪ್ರಾಚ್ಯವಸ್ತು ಇಲಾಖೆ ಷರತ್ತಿನಂತೆ ಕೈಗೆತ್ತಿಕೊಂಡಿದ್ದು, ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರಕ್ಕೆ ಹಾನಿಯಾಗಿಲ್ಲ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ತಾಲೂಕಿನ ಪಂಪಾಸರೋವರಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 13ನೇ ಶತಮಾನದ ಪುಷ್ಕರಣೆ ಮತ್ತು ಶ್ರೀ ಜಯಲಕ್ಷ್ಮಿ ದೇವಾಲಯವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕಾಯ್ದೆ ಮತ್ತು ಶಾಸ್ತ್ರೋಕ್ತವಾಗಿ ಜೀರ್ಣೋದ್ಧಾರ ಕೈಗೊಂಡಿದ್ದು, ಎಲ್ಲಿಯೂ ಲೋಪವಾಗಿಲ್ಲ. ಸ್ಥಳೀಯರು, ರಾಜವಂಶಸ್ಥರು, ಇತಿಹಾಸ ತಜ್ಞರು ಮತ್ತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ನಡುವಿನ ಸಮನ್ವಯತೆ ಮತ್ತು ಸಂಪರ್ಕ ಕೊರತೆಯಿಂದ ಊಹಾಪೋಹಗಳು ಎದ್ದಿವೆ. ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ. ಮುಂದಿನ ಪೀಳಿಗೆಗೆ ಸ್ಮಾರಕಗಳು ಉಳಿಯಲಿ ಎಂಬ ಕಾರಣಕ್ಕಾಗಿ ಪ್ರಾಚ್ಯವಸ್ತು, ಹವಾಮಾ ಮತ್ತು ತಾಲೂಕು ಆಡಳಿತದ ಸುಪರ್ದಿಯಲ್ಲಿ ನಡೆಯುತ್ತಿದೆ. ದೇವಾಲಯದಲ್ಲಿ ನಿಧಿ ಪಡೆದಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡುವ ಮುನ್ನ ವಾಸ್ತವಾಂಶವನ್ನು ಅರಿಯಬೇಕು. ಜೀರ್ಣೋದ್ಧಾರ ಕಾಮಗಾರಿಗೆ ಸ್ಥಳೀಯರು ಮತ್ತು ದೇವಾಲಯ ಸಮಿತಿಯವರು ಒಪ್ಪಿಗೆ ನೀಡಿರುವ ಬಗ್ಗೆ ದಾಖಲೆಗಳಿವೆ. ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಸ್ಥಳೀಯರು, ರಾಜವಂಶಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತ ನಡೆಯಬೇಕಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪುಷ್ಕರಣೆ, ದೇವಾಲಯ ಮತ್ತು ಮಂಟಪ ಕಾಮಗಾರಿ ವೀಕ್ಷಿಸಿದ ನಂತರ ನಿರ್ವಹಣೆ ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದುಕೊಂಡರು.

ತಹಸೀಲ್ದಾರ್ ಯು.ನಾಗರಾಜ್, ಬಿಜೆಪಿ ಮುಖಂಡರಾದ ಚನ್ನಪ್ಪ ಮಳಗಿ, ಸಂಗಯ್ಯಸ್ವಾಮಿ ಸಂಶಿಮಠ, ಯರ‌್ರಿಸ್ವಾಮಿ ಗೌಡ, ಚಂದ್ರಪ್ಪ ಉಪ್ಪಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net