ಭತ್ತ ಖರೀದಿ ಕೇಂದ್ರಕ್ಕಾಗಿ ಸಿಎಂ ಜತೆ ಚರ್ಚೆ ಮಾಡುವುದಾಗಿ ಹೇಳಿದ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ

020522 Meeting of Agriculture and APMC Officers at Gangawati APMC
ಗಂಗಾವತಿ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೋಮವಾರ ಮಾತನಾಡಿದರು.
Published on

ಗಂಗಾವತಿ: ಭತ್ತ ಖರೀದಿ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಸಿಎಂರೊಂದಿಗೆ ತ್ರಿವಳಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಚರ್ಚೆ ನಡೆಸಲಿದ್ದು, ವಾಸ್ತವಿಕತೆ ಬಗ್ಗೆ ಗಮಹರಿಸಲಾಗುವುದು ಎಂದು ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರೈತರು ಬೆಳೆದ ತಳಿಗಳ ಆಧಾರದ ಮೇಲೆ ಬೆಲೆ ನಿಗದಿಯಾಗಬೇಕಿದ್ದು, ಸಮೀಕ್ಷೆ ಸಂದರ್ಭದಲ್ಲಿ ಅಧಿಕಾರಿಗಳು ಕೆಲ ಬದಲಾವಣೆಗಳನ್ನು ಮಾಡಬೇಕಿದೆ. ಸಮೀಕ್ಷೆ ಸಾರ್‌ವೇರ್‌ನಲ್ಲಿ ತಳಿ ನಮೂದಿಸುವ ಪ್ರತ್ಯೇಕ ಕಾಲಂ ಸೇರ್ಪಡೆಯಾಗಬೇಕಿದ್ದು, ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಭತ್ತ ಖರೀದಿ ಕೇಂದ್ರ ತೆರೆಯುವ ವಿಚಾರದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಯ ಶಾಸಕ, ಸಂಸದರ ನಿಯೋಗ ಮೇ 4ರಂದು ಸಿಎಂ ಭೇಟಿಯಾಗುತ್ತಿದ್ದು, ರೈತರು ಅನುಭವಿಸುತ್ತಿರುವ ವಾಸ್ತವಿಕತೆ ಬಗ್ಗೆ ಚರ್ಚಿಸಲಾಗುವುದು. ಬೆಲೆ ಖಾತರಿ ಕಾಯ್ದೆ ಜಾರಿಯಾದರೆ ರೈತರಿಗೆ ಅನುಕೂಲವಾಗಲಿದ್ದು, ವಾಸ್ತವಿಕತೆ ವರದಿ ಕೊರತೆಯಿಂದ ಖರೀದಿ ಕೇಂದ್ರದ ಬೆಲೆ ನಿಗದಿಗೆ ವೇದಿಕೆ ಸಿಗುತ್ತಿಲ್ಲ. ಭತ್ತದ ಬೆಳೆಯುವ ಪ್ರದೇಶದಲ್ಲಿ 20.25 ಲಕ್ಷ ಕ್ವಿಂಟಾಲ್ ಇಳುವರಿ ನಿರೀಕ್ಷಿಸಿದ್ದು, ಫಸಲಿನ ಬಹುತೇಕ ಕಟಾವು ಪೂರ್ಣಗೊಂಡಿದೆ. ಕೃಷಿ, ಎಪಿಎಂಸಿ, ನೀರಾವರಿ ಮತ್ತು ಕಂದಾಯ ಅಧಿಕಾರಿಗಳು ನೀಡುವ ಸಮೀಕ್ಷೆ ರೀತಿ ಬದಲಾಗಬೇಕಿದ್ದು, ಪ್ರಾಯೋಗಿಕ ವರದಿಗೆ ಮಹತ್ವ ನೀಡಬೇಕಿದೆ. ನಿಜವಾದ ನಷ್ಟ ಅನುಭವಿಸಿದ ರೈತರಿಗೆ ವಿಮೆ ದೊರೆಯುತ್ತಿಲ್ಲ. ರೈಸ್ ಮಿಲ್ಲರ್ಸ್‌ ಕ್ವಿಂಟಾಲ್‌ಗೆ 65 ಕೆಜಿ ಅಕ್ಕಿ ನೀಡಿದರೆ ಹೊರ ರಾಜ್ಯದಿಂದ ಅಕ್ಕಿ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ ಎಂದರು.

ಎಪಿಎಂಸಿ ಸಹಾಯಕ ನಿರ್ದೇಶಕ ಎ.ಶ್ಯಾಂ ಮಾತನಾಡಿ, ಕಳೆದ ಬಾರಿ 10 ಖರೀದಿ ಕೇಂದ್ರ ಆರಂಭಿಸಿದ್ದು, 116 ರೈತರು ನೋಂದಣಿಗೊಂಡಿದ್ದು. ನಿರೀಕ್ಷಿಕ ಪ್ರಮಾಣದ ಖರೀದಿ ಕೇಂದ್ರಕ್ಕೆ ಭತ್ತ ಬರಲಿಲ್ಲ ಎಂದರು.

ಕಾಡಾ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಕಾರಟಗಿ ವಿಶೇಷ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಸುರೇಶ ಬಾಬು, ಗಂಗಾವತಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಹರೀಶ್ ಪತ್ತಾರ್, ಕೃಷಿ ಅಧಿಕಾರಿ ಚನ್ನಬಸವ, ಸಿಬ್ಬಂದಿ ಪ್ರಭು ಕಬ್ಬಿಣದ ಇತರರಿದ್ದರು.

ಮಾಹಿತಿ ನೀಡಲು ತಡಕಾಟ: ಜಿಲ್ಲೆಯ ಭತ್ತದ ಇಳುವರಿ ಪ್ರಮಾಣ, ವಿಮೆ ಮತ್ತು ಮಾರುಕಟ್ಟೆ ಶುಲ್ಕ ವಸೂಲಿ ಕುರಿತ ಮಾಹಿತಿ ನೀಡಲು ಅಧಿಕಾರಿಗಳು ತಡಕಾಡಿದರೂ ಸಮರ್ಪಕ ಉತ್ತರ ಬರಲಿಲ್ಲ. ಅಸಮಧಾನಗೊಂಡ ಆಯೋಗದ ಅಧ್ಯಕ್ಷರು, ಅಧಿಕಾರಿಗಳು ನೀಡಿದ ಕೃಷಿ ಪದ್ಧತಿ ಮತ್ತು ಸಮೀಕ್ಷೆ ವರದಿಯಿಂದ ಬೇಸರಪಟ್ಟರು. ಕೊನೆಗೆ ಮಕ್ಕಳಿಗೆ ಹೇಳುವಂತೆ ಲೆಕ್ಕಾಚಾರ ಮಾಡಿ ತೋರಿಸಿದರು. ಕೃಷಿ ಸಮರ್ಪಕ ವರದಿ ಬಗ್ಗೆ ಹಳಬರಿಗೆ ಗೊತ್ತಿದ್ದಷ್ಟು ಹೊಸ ಅಧಿಕಾರಿಗಳಿಗೆ ಗೊತ್ತಿಲ್ಲ. ಮುಂದೆ ಬರುವರಿಗಂತೂ ಇದರ ಮಾಹಿತಿಯೇ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಸಲ್ಲಿಸುವ ಭತ್ತದ ತಳಿಗಳ ಕನಿಷ್ಠ ಮತ್ತು ಗರಿಷ್ಠ ಬೆಲೆ ವರದಿ ಅವೈಜ್ಞಾನಿಕವಾಗಿದ್ದರಿಂದ ಖರೀದಿ ಕೇಂದ್ರದಲ್ಲಿ ಬೆಲೆ ನಿರ್ಧರಿಸುವುದು ಕಷ್ಟವಾಗುತ್ತಿದೆ. ಕೆಲವೊಮ್ಮೆ ರೈತರು ಕೇಳಿದ ದರಕ್ಕಿಂತ ಮಾರುಕಟ್ಟೆ ವರದಿಯಲ್ಲಿ ಹೆಚ್ಚಿರುವುದು ಗೊಂದಲಕ್ಕೆ ಕಾರಣವಾಗುತ್ತಿದೆ.| ಹನುಮನಗೌಡ ಬೆಳಗುರ್ಕಿ, ರಾಜ್ಯ ಬೆಲೆ ಆಯೋಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net