

ಗಂಗಾವತಿ: ನಗರದ ಬಿಬಿಸಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯ ಪಾಲಕರಿಗೆ ಬಾಕಿ ಶುಲ್ಕ ಪಾವತಿಸದಿದ್ದರೆ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದೆ ಎಂಬ ಆರೋಪ ವಿದ್ಯಾರ್ಥಿನಿ ಪಾಲಕರಿಂದ ಕೇಳಿಬಂದಿದ್ದು ಆಡಳಿತ ಮಂಡಳಿ ಆರೋಪ ತಳ್ಳಿಹಾಕಿದೆ.
ನಗರದ ಬಿಬಿಸಿ ಕಾಲೇಜು ಆಫ್ ನರ್ಸಿಂಗ್‌ನಲ್ಲಿ ಕನಕಗಿರಿ ತಾಲೂಕಿನ ಮುಸಲಾಪುರದ ಕಾವೇರಿ ಹನುಮಂತಪ್ಪ ವಾಲೀಕಾರ್ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದಿದ್ದರು. ಮೊದಲಿಗೆ 10ಸಾವಿರ ರೂ. ಶುಲ್ಕ ಭರಿಸಿದ್ದರು. ಆನಂತರ ಇದೇ ವಿದ್ಯಾರ್ಥಿನಿ ಗದಗ ಕಾಲೇಜೊಂದರಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕ ಹಿನ್ನೆಲೆ ಅಲ್ಲಿ ಪ್ರವೇಶ ಪಡೆದಿದ್ದರಿಂದ ನಗರದ ಕಾಲೇಜಿಗೆ ಗೈರಾಗಿದ್ದಾರೆ.
ಮೂಲ ದಾಖಲೆಗಳನ್ನು ಹಿಂದಿರುಗಿಸುವಂತೆ ಕೋರಿ ಬುಧವಾರ ವಿದ್ಯಾರ್ಥಿನಿಯು ಬಿಬಿಸಿ ನರ್ಸಿಂಗ್ ಕಾಲೇಜಿಗೆ ತೆರಳಿದಾಗ ಪ್ರವೇಶದ ವೇಳೆ ನೀಡಿದ ಭರವಸೆಯಂತೆ ಬಾಕಿ ಶುಲ್ಕ 90 ಸಾವಿರ ರೂ. ಪಾವತಿಸುವಂತೆ ಕಾಲೇಜು ಆಡಳಿತ ಕೇಳಿದೆ ಎಂದು ಹೇಳಲಾಗಿದೆ. ಈ ವೇಳೆ ವಿದ್ಯಾರ್ಥಿನಿ ಮತ್ತು ಪಾಲಕರು ತಮ್ಮ ಬಳಿ ಹಣವಿಲ್ಲ, ಪ್ರಮಾಣ ಪತ್ರ ನೀಡಿದರೆ ಭವಿಷ್ಯದಲ್ಲಿ ಬಾಕಿ ಶುಲ್ಕ ಪಾವತಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಆಡಳಿತ ಮಂಡಳಿ ಶುಲ್ಕ ಭರಿಸುವಂತೆ ಪಟ್ಟು ಹಿಡಿದ ಕಾರಣ ಮಾಂಗಲ್ಯ ಇತರ ಚಿನ್ನದ ಒಡವೆಗಳನ್ನು ನೀಡಿದ್ದಾಗಿ ಪಾಲಕರು ಆರೋಪಿಸಿದ್ದು, ಕಾಲೇಜಿನ ಆಡಳಿತ ಮಂಡಳಿಯು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.
ವ್ಯಾಪಕ ವಿರೋಧ: ಮೂಲ ಪ್ರಮಾಣ ಪತ್ರಕ್ಕಾಗಿ ಮಾಂಗಲ್ಯ ಸೇರಿ ಇತರ ಒಡವೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಎಸ್‌ಎಫ್ ಐ ತಾಲೂಕು ಸಮಿತಿ ಪದಾಧಿಕಾರಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ತಾಲೂಕಾಡಳಿತ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಆಡಳಿತ ಮಂಡಳಿ ಶಿಕ್ಷಣ ನೀತಿ ಉಲ್ಲಂಘಿಸಿದೆ ಎಂದು ಹೋರಾಟ ನಿರತ ಸಮಿತಿ ಪದಾಧಿಕಾರಿಗಳಾದ ಶಿವಕುಮಾರ ಈಚನಾಳ್, ಬಾಲಾಜಿ ಚಳ್ಳಾರಿ, ಎಂ.ಶರೀಫ್, ದುರುಗೇಶ, ಮಾರುತಿ, ಶರಣಬಸವ, ಅಮೃತಾ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಯುವ ಉತ್ತೇಜನ ಸೇನಾ ಪಡೆ ತಾಲೂಕು ಸಮಿತಿ ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ ನೇತೃತ್ವದ ಕಾರ್ಯಕರ್ತರು ಬಿಬಿಸಿ ಕಾಲೇಜು ಬಳಿ ತೆರಳಿ ವಿದ್ಯಾರ್ಥಿನಿಯ ಪರವಾಗಿ ಮನವಿ ಸಲ್ಲಿಸಿದರು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯು ಪ್ರತಿಕ್ರಿಯಿಸಿ ತಾವು ಪಾಲಕರ ಆಭರಣಕ್ಕೆ ಬೇಡಿಕೆಯಿಟ್ಟಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡಲಾಗಿದೆ ಎಂದು ವಿವರಿಸಿದೆ.
ಮಗಳ ಭವಿಷ್ಯ ಹಿತದೃಷ್ಟಿಯಿಂದ ಮಾಂಗಲ್ಯ ಸೇರಿ ಚಿನ್ನದ ಒಡವೆ ನೀಡಿ ಪ್ರಮಾಣಪತ್ರ ಪಡೆದುಕೊಂಡಿದ್ದು, ಕಾಲೇಜು ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಹಣ ಕೊಡಿ ಇಲ್ಲ, ತಾಳಿ ಕೊಡಿ ಎಂದು ಕೇಳಿದ್ದಾರೆ.
ರೇಣುಕಮ್ಮ ವಿದ್ಯಾರ್ಥಿನಿ ತಾಯಿ
ಬಾಕಿ ಶುಲ್ಕ ಕೊಡಿ ಎಂದಿದ್ದೇವೆ ಹೊರತು, ಮಾಂಗಲ್ಯ, ಚಿನ್ನದ ಒಡವೆ ಕೊಡಿ ಎಂದು ಕೇಳಿಲ್ಲ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವ ಕಾರ್ಯ ಮಾಡಲಾಗಿದೆ. ಅವರೇ ರಂಪಾಟ ಮಾಡಿದ್ದು, ಪಾಲಕರು ಇನ್ನಿಬ್ಬರನ್ನು ಕರೆತಂದು ವಿಡಿಯೋ ಮಾಡಿಸಿದ್ದಲ್ಲದೇ ಕಾಲೇಜಿನಲ್ಲಿ ಗೊಂದಲ ಮೂಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಶುಲ್ಕ ನೀತಿ ಬಗ್ಗೆ ಮನವರಿಕೆ ಮಾಡಲು ಯತ್ನಿಸಿದರೂ ಕಿವಿಗೊಟ್ಟಿಲ್ಲ. ಆನಂತರ ಘಟನೆ ಬಗ್ಗೆ ಪಾಲಕರೇ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟು ಪ್ರಮಾಣಪತ್ರ ಪಡೆದುಕೊಂಡು ಹೋಗಿದ್ದಾರೆ
ಡಾ.ಸಿ.ಬಿ.ಚಿನಿವಾಲ್ ಬಿಬಿಸಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ