

ಗಂಗಾವತಿ: ಹಳೇ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಶಾಲಾ, ಕಾಲೇಜುಗಳು ಆರಂಭವಾಗುತ್ತಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಇಲ್ಲದಿರುವುದರಿಂದ ಟಿಕೆಟ್ ಪಡೆದು ಪ್ರಯಾಣಿಸಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ ಬಸ್ ಪಾಸ್ ನೀಡಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಳೇ ಬಸ್ ಪಾಸ್‌ಗೆ ಮಾನ್ಯತೆ ನೀಡಬೇಕು ಹಾಗೂ ಹೊಸ ಪಾಸ್ ನೀಡಲು ಮುಂದಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಬಸ್‌ಗಳ ಸಂಚಾರ ಆರಂಭಿಸುವ ಮೂಲಕ ಅನುಕೂಲ ಕಲ್ಪಿಸಬೇಕೆಂದು ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ್ ಒತ್ತಾಯಿಸಿದರು. ಬಳಿಕ ಸಾರಿಗೆ ಘಟಕ ವ್ಯವಸ್ಥಾಪಕ ಸಂಜೀವಮೂರ್ತಿಗೆ ಮನವಿ ಸಲ್ಲಿಸಲಾಯಿತು.
ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ ಮಾತನಾಡಿ, ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದು, ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಹೊಸ ಬಸ್ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪದಾಧಿಕಾರಿಗಳಾದ ಹನುಮಂತ ಮುಕ್ಕಂಪಿ, ಬಾಳಪ್ಪ ಹುಲಿಹೈದರ್, ಸೋಮನಾಥ, ಶಿವಕುಮಾರ, ರಾಘವೇಂದ್ರ, ಸುಮಿತ್ರಾ, ಎಸ್.ಪ್ರೀತಿ, ವಿಜಯಲಕ್ಷ್ಮೀ, ರೇಷ್ಮಾ, ಇಮ್ತಿಯಾಜ್ ಇದ್ದರು.