ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಶಾಂತಿಯುತ ಮತದಾನ

281020 Gangavati Teachers Election
ಗಂಗಾವತಿ ಸರ್ಕಾರಿ ಉರ್ದು ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಮತದಾನ ಕೇಂದ್ರದಲ್ಲಿ ಮತಚಲಾಯಿಸಲು ಸರದಿಯಲ್ಲಿ ನಿಂತ ಶಿಕ್ಷಕರು.
Published on

ಗಂಗಾವತಿ: ಈಶಾನ್ಯ ಶಿಕ್ಷಕ ಮತಕ್ಷೇತ್ರದ ಚುನಾವಣೆಗಾಗಿ ನಗರ ಸೇರಿ ವೆಂಕಟಗಿರಿ ಮತ್ತು ಮರಳಿ ಮತದಾನ ಕೇಂದ್ರದಲ್ಲಿ ಮತದಾನ ಬುಧವಾರ ಜರುಗಿದ್ದು, ಸೂಕ್ತ ಬಂದೋಬಸ್ತ್ ಆಯೋಜಿಸಲಾಗಿತ್ತು.

ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆ, ವೆಂಕಟಗಿರಿ ಮತ್ತು ಮರಳಿ ಗ್ರಾಪಂ ಕಚೇರಿಯಲ್ಲಿ ಮತದಾನ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ಗಂಗಾವತಿಯಲ್ಲಿ 401, ವೆಂಕಟಗಿರಿಯಲ್ಲಿ 58 ಮತ್ತು ಮರಳಿಯಲ್ಲಿ 55 ಸೇರಿ 514 ಶಿಕ್ಷಕರು ಮತ ಚಲಾಯಿಸುವ ಅರ್ಹತೆ ಪಡೆದಿದ್ದರು. ಸರಾಸರಿ ಶೇ.80 ಮತದಾನವಾಗಿದ್ದು, ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದ ಚುನಾವಣೆ ಸಿಬ್ಬಂದಿ ಮತದಾನ ಕೇಂದ್ರದ ಬಳಿ ಬೀಡುಬಿಟ್ಟಿದ್ದರು. ಶಿಕ್ಷಕರನ್ನು ಮತದಾನ ಕೇಂದ್ರಕ್ಕೆ ಕರೆ ತರಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಸರತ್ತು ನಡೆಸಿದರು.

ಮತದಾನ ಕೇಂದ್ರಕ್ಕೆ ಬಂದ ಶಿಕ್ಷಕರನ್ನು ಬಿಜೆಪಿ ಅಭ್ಯರ್ಥಿ ಪರ ಮತಚಲಾಯಿಸುವಂತೆ ಶಾಸಕ ಪರಣ್ಣಮುನವಳ್ಳಿ ಮನವಿ ಮಾಡಿದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಂಸದ ಎಸ್.ಶಿವರಾಮನಗೌಡ, ಜೆಡಿಎಸ್ ಅಭ್ಯರ್ಥಿ ಪರ ಜೆಡಿಎಸ್ ಮುಖಂಡ ಪಾಡಗುತ್ತಿ ಅಖ್ತರ್‌ಸಾಬ್ ಮನವೊಲಿಸಿದರು. ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದು, ವಿಪ ಚುನಾವಣೆಯಲ್ಲೂ ಬಿಜೆಪಿ ಗೆಲವು ಸಾಧಿಸಲಿದೆ ಎಂದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಎಚ್.ಎಂ.ತಿಪ್ಪೇರುದ್ರಸ್ವಾಮಿ, ಮುಖಂಡರಾದ ಚಂದ್ರಶೇಖರ್ ಅಕ್ಕಿ, ವಿರೇಶ ಬಲ್ಕುಂದಿ, ಕಾಶೀನಾಥ ಚಿತ್ರಗಾರ ಇತರರಿದ್ದರು.

ಗೆಲುವು ಖಚಿತ: ಕಳೆದ ಬಾರಿ ಗೆಲುವು ಸಾಧಿಸಿದ ಶರಣಪ್ಪ ಮಟ್ಟೂರು ಗೆಲುವು ಖಚಿತವಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವರಾಮನಗೌಡ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಶಿಕ್ಷಕರಲ್ಲಿ ಉತ್ತಮ ಸ್ಪಂದನೆಯಿದ್ದು, ಗೆಲುವಿನ ಭರವಸೆ ನೀಡಿದ್ದಾರೆ ಎಂದರು. ಜಿಪಂ ಸದಸ್ಯ ಅಮರೇಶ ಗೋನಾಳ್, ತಾಪಂ ಅಧ್ಯಕ್ಷ ಮಹ್ಮದ್ ರಫೀ, ವಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿ ಪಾಟೀಲ್, ಮುಖಂಡರಾದ ಶರಣಬಸವರಾಜರೆಡ್ಡಿ, ರೆಡ್ಡಿ ಶ್ರೀನಿವಾಸ, ಆಸ್ೀ ಹುಸೇನ್ ಇತರರಿದ್ದರು.

ಶಿಕ್ಷಕರಿಗಿರಲಿ ಬೆಂಬಲ: ಜೆಡಿಎಸ್ ಅಭ್ಯರ್ಥಿ ವೃತ್ತಿಪರ ಶಿಕ್ಷಕರಾಗಿದ್ದು, ಶಿಕ್ಷಕರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ಹಿರಿಯ ಮುಖಂಡ ಪಾಡಗುತ್ತಿ ಅಖ್ತರ್‌ಸಾಬ್ ವಿಶ್ವಾಸ ವ್ಯಕ್ತಪಡಿಸಿದರು. ಕರೊನಾ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಕೈಗೊಂಡಿಲ್ಲ, ಆನ್‌ಲೈನ್ ಮೂಲಕ ಎಲ್ಲ ಮತದಾರರನ್ನು ಸಂಪರ್ಕಿಸಲಾಗಿದೆ ಎಂದರು. ಮುಖಂಡರಾದ ಶೇಖ್ ನಬೀಸಾಬ್, ವೆಂಕಟೇಶ ಛಲವಾದಿ, ಎಂ.ಡಿ.ಸಲೀಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net