

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬಳಿ ಗ್ರೀನ್ ಕಿಷ್ಕಿಂಧಾ ಮತ್ತ ಸೇವ್ ಕಿಷ್ಕಿಂಧಾ ಸಂಸ್ಥೆಯಿಂದ ಮುಂಗಾರು ವನಮಹೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮಳೆಗಾಲ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ವನಮಹೋತ್ಸವ ಅಭಿಯಾನದ ಮೂಲಕ ಸಂಸ್ಥೆ ಪದಾಧಿಕಾರಿಗಳು ಪರಿಸರ ಜಾಗೃತಿ ಮೂಡಿಸುತ್ತಿದ್ದು, ಪಾರ್ಕಿಂಗ್ ಮತ್ತು ಪ್ರದಕ್ಷಿಣಾ ಪಥ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಸಂಕಲ್ಪ ಕೈಗೊಂಡಿದ್ದಾರೆ. ಸಸಿ ನೆಡುವ ಮೂಲಕ ಚಾಲನೆ ನೀಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಮಾತನಾಡಿ, ಸಕಲ ಜೀವ ಸಂಕುಲಗಳ ಒಳಿತಿಗೆ ಪರಿಸರ ರಕ್ಷಿಸಬೇಕಿದ್ದು, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಆರೈಕೆ ಕೈಗೊಂಡರೆ ಉತ್ತಮ ಪರಿಸರ ನಿರ್ಮಿಸಬಹುದು. ಪರಿಸರ ಕಾಳಜಿಯನ್ನು ಭವಿಷ್ಯತ್ವದ ಮಕ್ಕಳಲ್ಲಿ ಮೂಡಿಸಬೇಕಿದೆ ಎಂದರು.
ಸಂಸ್ಥೆ ಮುಖ್ಯಸ್ಥೆ ಡಿ.ಸಿಂಧು ಮಾತನಾಡಿ, ವರ್ಷವಿಡೀ ಅಂಜನಾದ್ರಿ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲು ನಿರ್ಧರಿಸಿದ್ದು, ಸಾರ್ವಜನಿಕರ ಸಹಕಾರ ಮುಖ್ಯ ಎಂದರು.