ಮ್ಯೂಟೇಷನ್‌ಗಾಗಿ ಲಂಚದ ಬೇಡಿಕೆ: ಎಸಿಬಿ ಬಲೆಗೆ ಸಂಗಾಪುರ ಗ್ರಾಪಂ ಪಿಡಿಒ, ಕಾರ್ಯದರ್ಶಿ

130122 Sangapura Grama Panchayat
Published on

ಗಂಗಾವತಿ: ನಿವೇಶನವೊಂದರ ಮ್ಯೂಟೇಷನ್‌ಗಾಗಿ ಲಂಚ ಪಡೆಯುತ್ತಿದ್ದ ತಾಲೂಕಿನ ಸಂಗಾಪುರ ಗ್ರಾಪಂ ಪಿಡಿಒ ಪಿ.ಎಸ್.ಶೇಖ್‌ಸಾಬ್, ಕಾರ್ಯದರ್ಶಿ ನೂರ್ ಉಲ್ಲಾಹಕ್ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಂಗಾಪುರ ಗ್ರಾಪಂ ಕಚೇರಿಯಲ್ಲಿ ದೂರುದಾರ ಬಂಡಿಬಸಪ್ಪ ಕ್ಯಾಂಪ್ ವಿಜಯಕುಮಾರ ಎಂಬುವರಿಂದ 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ಶಿವಕುಮಾರ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ಬಂಡಿಬಸಪ್ಪ ಕ್ಯಾಂಪ್‌ನಲ್ಲಿ ವಿಜಯಕುಮಾರ ಎಂಬುವರಿಗೆ ಸೇರಿದ ನಿವೇಶನದ ಮ್ಯೂಟೇಷನಗಾಗಿ ಹಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ಇತ್ಯರ್ಥಕ್ಕಾಗಿ 6 ಸಾವಿರ ರೂ. ಲಂಚ ಕೇಳಿದ್ದರು. ಪಿಡಿಒ ಮತ್ತು ಕಾರ್ಯದರ್ಶಿ ವರ್ತನೆಗೆ ರೋಸಿ ಹೋದ ವಿಜಯಕುಮಾರ, ಎಸಿಬಿಗೆ ದೂರು ನೀಡಿದ್ದರು.

ಪಿಡಿಒ ಪಿ.ಎಸ್.ಶೇಖ್‌ಸಾಬ್ ಇತ್ತೀಚೆಗೆ ಚಿಕ್ಕಬೆಣಕಲ್‌ಗೆ ವರ್ಗವಾಗಿದ್ದು, ಹೊಸ ಪಿಡಿಒಗೆ ಅಧಿಕಾರ ಹಸ್ತಾಂತರಿಸಿರಲಿಲ್ಲ. ಅಧಿಕಾರದಲ್ಲಿರದಿದ್ದರೂ ಹಣಕ್ಕಾಗಿ ಗ್ರಾಪಂಗೆ ಬಂದಿದ್ದು, ಕಾರ್ಯದರ್ಶಿ ನೂರ್‌ಉಲ್ಲಾ ಹಕ್ ಮೂಲಕ ಹಣ ಪಡೆಯುತ್ತಿರುವಾಗಲೆ ಸಿಕ್ಕಿ ಬಿದ್ದಿದ್ದಾರೆ. ಕಚೇರಿಯಲ್ಲಿರುವ ಸಿಸಿ ಕ್ಯಾಮರಾವನ್ನು ಅಧಿಕಾರಿಗಳ ತಂಡ ಪರಿಶೀಲಿಸಿದ್ದು, ಕಚೇರಿಯಲ್ಲಿನ ಚಲವಲನಗಳ ದೃಶ್ಯಾವಳಿಗಳ ಮಾಹಿತಿ ಪಡೆದುಕೊಂಡಿದ್ದಾರೆ. ಲಂಚ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ದಾಳಿಯಲ್ಲಿ ಪಿಐ ಆಂಜನೇಯ, ಪಿಎಸ್‌ಐ ಶಿವರಾಜ ಇಂಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net