ನಗರಸಭೆ ಸದಸ್ಯರು ಮತ್ತು ಪೌರಾಯುಕ್ತರ ನಡುವೆ ಜಟಾಪಟಿ

gvt 02
ಗಂಗಾವತಿ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಉಲ್ಲಂಸಿದ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಯನ್ನು ಆಡಳಿತ ಪಕ್ಷದ ಸದಸ್ಯರು ಶುಕ್ರವಾರ ತರಾಟೆಗೆ ತೆಗೆದುಕೊಂಡರು. ಸದಸ್ಯರಾದ ನವೀನ್ ಮಾಲಿ ಪಾಟೀಲ್, ಉಮೇಶ ಸಿಂಗನಾಳ್, ಶರಭೋಜಿರಾವ್ ಗಾಯಕ್ವಾಡ, ವಾಸು ನವಲಿ ಇದ್ದರು.
Published on

ಗಂಗಾವತಿ: ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ, ಆಸ್ತಿ ತೆರಿಗೆ ಪರಿಷ್ಕರಣೆ ವಿಚಾರದಲ್ಲಿ ಸದಸ್ಯರು ಮತ್ತು ಪೌರಾಯುಕ್ತರ ನಡುವೆ ಜಟಾಪಟಿ ನಡೆಯಿತು.

ಶೇ.4 ಹೆಚ್ಚಳಕ್ಕೆ ಪೌರಾಯುಕ್ತ ಆರ್. ವಿರೂಪಾಕ್ಷಪ್ಪ ಮಂಡಿಸಿದಾಗ ಆಡಳಿತ ಹಾಗೂ ವಿಪಕ್ಷದ ಸದಸ್ಯರು ವಿರೋಧಿಸಿದರು. ಸಾರ್ವಜನಿಕರಿಗೆ ಹೊರೆಯಾಗುವುದು ಬೇಡ. ಶೇ.3 ಹೆಚ್ಚಿಸುವಂತೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಜೆಡಿಎಸ್‌ನ ಎಂ.ಡಿ.ಉಸ್ಮಾನ್, ಬಿಜೆಪಿಯ ಉಮೇಶ ಸಿಂಗನಾಳ್ ಅಲ್ಲದೇ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಹೇಳಿದರೂ ಒಪ್ಪದ ಪೌರಾಯುಕ್ತ, ಶೇ.4 ಹೆಚ್ಚಿಸುತ್ತೇನೆಂದು ಪಟ್ಟು ಹಿಡಿದರು.

ಇದರಿಂದ ಕೆರಳಿದ ಸದಸ್ಯರು ವಾಗ್ವಾದಕ್ಕಿಳಿದಿದ್ದರಿಂದ ಕೆಲಕಾಲ ಗದ್ದಲ ಉಂಟಾಯಿತು. ಏರು ಧ್ವನಿಯಲ್ಲಿ ಸದಸ್ಯರನ್ನು ಬೆದರಿಸಲೆತ್ನಿಸಿದ ಪೌರಾಯುಕ್ತರ ನಡೆಗೆ ಎಲ್ಲ ಸದಸ್ಯರು ವಿರೋಧಿಸಿದರು. ಶೇ.3 ಹೆಚ್ಚಿಸಿದ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಎಂದು ಸದಸ್ಯರು ಹೇಳಿದಾಗ, ಪರಿಸ್ಥಿತಿ ತಿಳಿಗೊಂಡಿತ್ತು. ಏ.1ರಿಂದ ಕುಡಿವ ನೀರು ಪೂರೈಕೆಗೆ ಮೀಟರ್ ಅಳವಡಿಕೆ, ಒಳಚರಂಡಿ ನಿರ್ವಹಣೆ ಕುರಿತು ಚರ್ಚಿಸಿದರೂ, ಒಮ್ಮತದ ನಿರ್ಣಯಕ್ಕೆ ಬರಲಿಲ್ಲ. 82 ವಿಷಯಗಳನ್ನು ಒಂದೇ ಗಂಟೆಯಲ್ಲಿ ಚರ್ಚಿಸುವ ಮೂಲಕ ಬಹುತೇಕ ವಿಷಯಗಳಿಗೆ ಅನುಮೋದನೆ ಪಡೆಯಲಾಯಿತು.

ಪ್ರೆಸಿಡೆಂಟ್ ಸೈಲೆಂಟ್, ಕಮಿಷನರ್ ಡಿಕ್ಟೇಟರ್‌ಶಿಪ್

ಸಭೆಯುದ್ದಕ್ಕೂ ಪೌರಾಯುಕ್ತ ಆರ್. ವಿರೂಪಾಕ್ಷಪ್ಪ ಸರ್ವಾಧಿಕಾರಿಯಂತೆ ವರ್ತಿಸಿದರೆ, ನಿಭಾಯಿಸಬೇಕಿದ್ದ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಸೈಲೆಂಟ್ ಆಗಿದ್ದರು. ಸದಸ್ಯರ ಆಸನ ವ್ಯವಸ್ಥೆಯಲ್ಲೂ ಲೋಪವಾಗಿದ್ದು, ಬೇಕಾದವರಿಗೆ ಮೊದಲ ಸಾಲಿನಲ್ಲಿ ಮೀಸಲಿಟ್ಟಿದ್ದು, ಆಡಳಿತ ಪಕ್ಷದ ಸದಸ್ಯರ ವಿರೋಧಕ್ಕೆ ಕಾರಣವಾಯಿತು. ವಾರ್ಡ್ ಸಂಖ್ಯೆಯಂತೆ ವ್ಯವಸ್ಥೆಗೊಳಿಸಲು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರಲ್ಲದೇ, ಸಭೆ ಬಹಿಷ್ಕರಿಸಲು ನಿರ್ಧರಿಸಿದರು. ಮನವೊಲಿಕೆ ನಂತರ ವಾರ್ಡ್ ಸಂಖ್ಯೆಯಂತೆ ಬದಲಿಸಲಾಯಿತು. ತೆರಿಗೆ ಪರಿಷ್ಕರಣೆ ಸಂದರ್ಭದಲ್ಲಿ ನಾನು ಹೇಳಿದ್ದೇ ಕೇಳಬೇಕೆಂದು ಪೌರಾಯುಕ್ತ ಗುಡುಗಿದರಲ್ಲದೇ, ಕೆಲ ಸದಸ್ಯರಿಗೆ ಬೆದರಿಕೆ ಹಾಕಲೆತ್ನಿಸಿದರು. ಆಡಳಿತ ಪಕ್ಷದ ಸದಸ್ಯರಿಗೂ ಬೆಲೆಕೊಡದ ಪೌರಾಯುಕ್ತರ ವಿರುದ್ಧ ಎಲ್ಲ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು. ಪೌರಾಯುಕ್ತರ ಡಿಕ್ಟೇಟರ್‌ಶಿಪ್‌ಗೆ ಆಡಳಿತ ಪಕ್ಷ ಮೌನವಹಿಸಿದ್ದರೆ, ವಿಪಕ್ಷ ಸದಸ್ಯರು ಮೋಜು ಅನುಭವಿಸಿದರು.

ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಇತರರಿದ್ದರು.

ಕೋಟ್: ಜನರಿಂದ ಆಯ್ಕೆಯಾಗಿ ಬಂದ ಸದಸ್ಯರ ಮಾತನ್ನು ಅಧಿಕಾರಿಗಳು ಕೇಳಬೇಕೆ ವಿನಹ, ಅಧಿಕಾರಿಗಳ ಮಾತನ್ನು ಸದಸ್ಯರು ಕೇಳಬೇಕಿಲ್ಲ. ಜನರಿಗೆ ಹೊರೆಯಾಗುವ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಪೌರಾಯುಕ್ತರ ಸರ್ವಾಧಿಕಾರ ಧೋರಣೆ ಒಪ್ಪಲ್ಲ.

> ಎಂ.ಡಿ.ಉಸ್ಮಾನ್. ಜೆಡಿಎಸ್ ಸದಸ್ಯ

ಕೋಟ್: ನಗರಸಭೆ ಆದಾಯ ಹೆಚ್ಚಿಸಲು ಆಸ್ತಿ ತೆರಿಗೆ ಪರಿಷ್ಕರಣೆ ಅನಿವಾರ್ಯವಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಶೇ.4 ಹೆಚ್ಚಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಸದಸ್ಯರು ಸಹಕರಿಸಬೇಕೆ ವಿನಹ ವಿರೋಧಿಸುವುದು ಸರಿಯಲ್ಲ.

> ಆರ್. ವಿರೂಪಾಕ್ಷಮೂರ್ತಿ. ಪೌರಾಯುಕ್ತ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net