ನಗರಸಭೆ ಆದಾಯ ಹೆಚ್ಚಳಕ್ಕೆ ಕ್ರಮ, ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಹೇಳಿಕೆ

Budget and Expenditure Pre-meeting
ಗಂಗಾವತಿ ನಗರಸಭೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಸೋಮವಾರ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವ್ಯವಸ್ಥಾಪಕ ಷಣ್ಮುಖಪ್ಪ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಇದ್ದರು.
Published on

ಗಂಗಾವತಿ: ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಗರದ ನಗರಸಭೆಯ ಆದಾಯ ಮೂಲ ಹೆಚ್ಚಳಕ್ಕೆ ಸಾರ್ವಜನಿಕರ ಪೂರಕ ಸಲಹೆಗಳನ್ನು ಸ್ವೀಕರಿಸಲಾಗುತ್ತಿದ್ದು, ಜನಸ್ನೇಹಿ ಬಜೆಟ್ ಮಂಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಬಜೆಟ್ ಮಂಡನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಡಿ.2024ರ ಅಂತ್ಯದವರೆಗೆ 17.11 ಕೋಟಿ ರೂ.ಆದಾಯ ಸಂದಾಯವಾಗಿದ್ದು, ಇನ್ನೂ ಹೆಚ್ಚಳವಾಗಬೇಕಿದೆ. ಜನರಿಗೆ ಹೊರೆಯಾಗದಂತೆ ತೆರಿಗೆ ಸ್ವರೂಪ ನಿಗದಿಪಡಿಸಿದ್ದು, ಶೇ.100 ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಲೇಔಟ್‌ಗಳನ್ನು ಸಕ್ರಮಗೊಳಿಸುವ ಮೂಲಕ ತೆರಿಗೆ ವಸೂಲಿ ಮಾಡಲಾಗುವುದು ಎಂದರು.

ುಟ್‌ಪಾತ್ ಅತಿಕ್ರಮಿಸಿಕೊಂಡ ಅಂಗಡಿ ಮಾಲೀಕರಿಂದ ಬಾಡಿಗೆ ವಸೂಲಿ ಮಾಡಿ ಎಂದು ನಗರಸಭೆ ಸದಸ್ಯ ಅಜಯ್ ಬಿಚ್ಚಾಲಿ ಹೇಳಿದರೆ, ನಗರಸಭೆ ಮಳಿಗೆಗಳಿಂದ ಬಾಡಿಗೆ ವಸೂಲಿ ಜತೆಗೆ ಬಾಕಿ ಉಳಿಸಿಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸದಸ್ಯ ಎಂ.ಡಿ.ಉಸ್ಮಾನ್ ಸಲಹೆ ನೀಡಿದರು.

ಬೀದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು. ಲೇಔಟ್‌ಗಳನ್ನು, ಸಿಐ ಸೈಟ್‌ಗಳನ್ನು ಮಾರಾಟ ಮಾಡದೇ, ಬಾಡಿಗೆ ರೂಪದಲ್ಲಿ ನೀಡುವಂತೆ ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಸವರಾಜ ಮ್ಯಾಗಳಮನಿ, ಶಿವಪ್ಪ ಮಾದಿಗ ಮನವಿ ಮಾಡಿದರು. 31 ಸಿಐ ಸೈಟ್‌ಗಳಲ್ಲಿ 12 ಪರಭಾರೆಯಾಗಿದ್ದು, ಉಳಿದ 19 ಸೈಟ್‌ಗಳಿಗೆ ಅರ್ಜಿ ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿವಿಧ ಮೂಲದ ತೆರಿಗೆ ಸ್ವರೂಪ, ಅನುದಾನ ಕ್ರೋಢಿಕರಣ ಕುರಿತು ಚರ್ಚಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವ್ಯವಸ್ಥಾಪಕ ಷಣ್ಮುಖಪ್ಪ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಸೇರಿ ಸದಸ್ಯರಿದ್ದರು.

ಅನಗತ್ಯ ಚರ್ಚೆ, ಸದಸ್ಯರು ಗೈರು: ಬಜೆಟ್ ಮಂಡನೆ ಪೂರ್ವಭಾವಿ ಸಭೆಗೆ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಸೇರಿ ಆಡಳಿತ ಮತ್ತು ವಿಪಕ್ಷದ 27 ಸದಸ್ಯರು ಗೈರಾಗಿದ್ದರು. ಮಹಿಳಾ ಸದಸ್ಯರ ಪರ ಒಬ್ಬರೇ ಬಂದಿದ್ದರು. ಬಂದ ಸದಸ್ಯರಲ್ಲಿ ಬಹುತೇಕರು ಮಾತನಾಡಲೇ ಇಲ್ಲ. ಆದಾಯ ಮೂಲದ ಬಗ್ಗೆ ಚರ್ಚಿಸುವ ಬದಲು, ಸೌಲಭ್ಯದ ಬಗ್ಗೆ ಚರ್ಚಿಸಿ ವಿಷಯಾಂತರಗೊಳಿಸಲಾಯಿತು. ಮಾಹಿತಿ ಕೊರತೆಯಿಂದ ಬಹುತೇಕ ಸಂಘಟನೆಗಳು ಸಭೆಯಿಂದ ದೂರ ಉಳಿದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net